ಜಿಲ್ಲೆ

ಪಾದಚಾರಿ ಮಾರ್ಗ ಸರಿಪಡಿಸಿ

ಗುಂಡ್ಲುಪೇಟೆ: ಪಟ್ಟಣದ ಪಾದಚಾರಿ ಮಾರ್ಗ ಸರಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ಕಾವಲು ಪಡೆ ಸಂಘಟನೆಯ ಪದಾಧಿಕಾರಿಗಳು ಬುಧವಾರ ಪುರಸಭೆಯ ಅಧ್ಯಕ್ಷ ಮಧುಸೂದನ್ ಹಾಗೂ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸಂಘಟನೆಯ ತಾಲೂಕು ಅಧ್ಯಕ್ಷ ಅಬ್ದುಲ್ ಮಾಲೀಕ್ ನೇತೃತ್ವದಲ್ಲಿ ಅಧ್ಯಕ್ಷರನ್ನು ಭೇಟಿ ಮಾಡಿದ ಪದಾದಿಕಾರಿಗಳು, ಪಟ್ಟಣದ ರಸ್ತೆಗಳ ಬದಿಯಲ್ಲಿ ಡೆಕ್‌ಗಳು ಕುಸಿದು ಪಾದಚಾರಿಗಳಿಗೆ ತುಂಬ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಪುರಸಭೆ ವತಿಯಿಂದ ಇದನ್ನು ಸರಿಪಡಿಸುವ ಜತೆಗೆ ಬದಿಗಳಲ್ಲಿ ಕಬ್ಬಿಣದ ಗ್ರಿಲ್‌ಗಳನ್ನು ಅಳವಡಿಸುವುದರಿಂದ ಅಪಘಾತಗಳನ್ನು ತಪ್ಪಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು. ನಿವೃತ್ತ ಮುಖ್ಯಶಿಕ್ಷಕ ಬ್ರಹ್ಮಾನಂದ, ಸಂಘಟನೆಯ ಅಬ್ದುಲ್ ಮುಬಾರಕ್, ರಾಮೇಗೌಡ, ಸಾದಿಕ್ ಪಾಷಾ, ಜಬ್ಬಾರ್, ರಾಜು, ರವಿಕುಮಾರ್, ಮಂಜುನಾಥ್ ಹಾಗೂ ಇತರರು ಇದ್ದರು.