ಚಿತ್ರದುರ್ಗ: ಮಕ್ಕಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬೇಕೆಂಬ ಹೆಬ್ಬಯಕೆಯಲ್ಲಿ ಪಾಲಕರು, ತಮ್ಮ ಮಕ್ಕಳು ದೈಹಿಕವಾಗಿಯೂ ಸದೃಢ ರಾಗಿರಬೇಕೆಂಬುದನ್ನು ಮರೆಯುತ್ತಿದ್ದಾರೆ. ಪಠ್ಯದ ಜತೆ ಆಟೋಟಕ್ಕೂ ಪ್ರಾತಿನಿಧ್ಯ ಕೊಡುವಂತೆ ಪಾಲಕರು ಮಕ್ಕಳನ್ನು ಪ್ರೋತ್ಸಾಹಿಸಬೇ ಕಿದೆ ಎಂದು ಚಿತ್ರದುರ್ಗ ಫುಟ್ಬಾಲ್ ಅಸೋಷಿಯೇಷನ್ ಅಧ್ಯಕ್ಷ ಫಾತ್ಯರಾಜನ್ ಹೇಳಿದರು.
ನಗರದ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಪುಟ್‌ಬಾಲ್ ಅಸೋಸಿಯೇಷನ್ ಹಾಗೂ ಸೆಡ್ ಟೆಕ್ನಾಲಜಿಯಿಂದ 14 ಮತ್ತು 17 ನೇ ವಯಸ್ಸಿನ ಮಕ್ಕಳಿಗೆ ಆಯೋಜಿಸಿದ್ದ ಫುಟ್‌ಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ತಮ್ಮ ಮಕ್ಕಳು ಉತ್ತಮ ಕ್ರೀಡಾ ಪಟುಗಳಾಗಲಿ ಎಂದು ಬಯಸುವಂಥ ಪಾಲಕರ ಸಂಖ್ಯೆ ಈಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ ಎಂದು ವಿಷಾದಿಸಿದರು.
ಅಂತಾರಾಷ್ಟ್ರೀಯ ಕ್ರೀಡಾಪಟು ಎನ್.ಡಿ.ಕುಮಾರ್, ಸೆಡ್ ಸಂಸ್ಥೆ ಮುಖ್ಯಸ್ಥ ಅಂಜುಮ್, ದೈಹಿಕ ಶಿಕ್ಷಣ ಶಿಕ್ಷಕ ವಿಲ್ಸನ್, ತರಬೇತುದಾರ ಸತ್ಯನಾರಾಯಣ ಮಾತನಾಡಿದರು. ಈ ಸಂದರ್ಭದಲ್ಲಿ ಕ್ರೀಡಾ ಪೋಷಕರನ್ನು ಗೌರವಿಸಲಾಯಿತು.