ಜಿಲ್ಲೆ

ಪಾಠಕ್ಕಷ್ಟೇ ಸೀಮಿತರಾಗಬೇಡಿ; ನಿವೃತ್ತ ನ್ಯಾಯಾದೀಶ ಗೋಪಾಲಗೌಡ

ಅರಕಲಗೂಡು: ಮನುಕುಲದ ಶ್ರೇಯಸ್ಸಿಗಾಗಿ ಸಕಲ ಜ್ಞಾನಾರ್ಜನೆ ಬಿತ್ತುವ ಶಿಕ್ಷಕರು ಪಾಠ- ಪ್ರವಚನಗಳಿಗಷ್ಟೇ ಸೀಮಿತರಾಗದೆ ವ್ಯವಸ್ಥೆಯ ಕಣ್ತೆರೆಸಿ ಸಮಾಜದಲ್ಲಿ ಕುಸಿಯುತ್ತಿರುವ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ನಿರ್ವಹಿಸಬೇಕಿದೆ ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ವಿ. ಗೋಪಾಲಗೌಡ ಹೇಳಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಶಿಕ್ಷಕರು ಕಾರಣೀಭೂತರಾಗಿದ್ದು ಇಂದು ಇಡೀ ಪ್ರಪಂಚವನ್ನೇ ಐಪೋನ್ ಮೂಲಕ ಕಾಣಲಾಗತ್ತಿದೆ. ಆರೋಗ್ಯ, ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಎಲ್ಲ ವ್ಯವಸ್ಥೆ ಬೆಳವಣಿಗೆಗಳ ಭರಾಟೆಗೆ ಶಿಕ್ಷಕರ ಶ್ರಮ ಮೂಲ ಕಾರಣ. ನಾನು ಶಾಸನವನ್ನು ಅರ್ಥೈಸಿಕೊಳ್ಳಲು ಶಿಕ್ಷಕರು ನೀಡಿದ ಜ್ಞಾನ ಶಕ್ತಿಯೇ ಕಾರಣವಾಗಿದೆ ಎಂದು ಕೊಂಡಾಡಿದರು.

ಶಿಕ್ಷಕರು ಸಮಾಜವನ್ನು ತಿದ್ದುವ ಶಿಲ್ಪಿಗಳಿದ್ದಂತೆ. ಯಾವುದೇ ಜನಪ್ರತಿನಿಧಿಗೆ ಧಕ್ಕದ ದೊಡ್ಡ ಹುದ್ದೆ ಶಿಕ್ಷಕರಿಗೆ ಸಿಗಬೇಕಿತ್ತು. ಆದರೆ ತಮ್ಮ ತ್ಯಾಗ ಮನೋಭಾವದಿಂದ ಶಿಕ್ಷಕರು ಸಮಾಜದ ಗುರುವಾಗಿದ್ದು ಸಾರ್ವಜನಿಕವಾಗಿ ಗೌರವಯುತ ಸ್ಥಾನಗಳಿಸಿದ್ದಾರೆ. ವರ್ತಮಾನದ ಶಿಕ್ಷಕರು ಮಕ್ಕಳಲ್ಲಿ ಬೌದ್ಧಿಕ ಮಟ್ಟ ಹೆಚ್ಚಿಸಿ ಭವಿಷ್ಯದ ಸಮಾಜಕ್ಕೆ ವಿದ್ಯಾರ್ಥಿಗಳ ಜವಾಬ್ದಾರಿ ಏನು ಎನ್ನುವುದನ್ನು ಕಲಿಸಬೇಕು. ಸಮಾಜದ ಕಟ್ಟಕಡೆಯ ಮಹಿಳೆಗೆ ಸಮಾನತೆ ಧಕ್ಕಬೇಕಿದೆ, ಇದೆಲ್ಲ ಶಿಕ್ಷಣದ ಬೆಳವಣಿಗೆಯಿಂದ ಮಾತ್ರ ಸಾಧ್ಯ ಎಂಬುದನ್ನು ನಿರೂಪಿಸಬೇಕಿದೆ ಎಂದು ಹೇಳಿದರು.

ಶಾಸಕ ಎ.ಟಿ. ರಾಮಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಹೊಣೆಗಾರಿಕೆಯನ್ನು ಶಿಕ್ಷಕರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಶಿಕ್ಷಕರು ದಾರಿ ತಪ್ಪಿದರೆ ಇಡೀ ವ್ಯವಸ್ಥೆಯೇ ಕಲುಷಿತವಾಗುತ್ತದೆ. ಶಿಕ್ಷಕ ವರ್ಗ ಸಮಾಜಕ್ಕೆ ಬೆಳಕಾಗಬೇಕು ಎಂದರು.

ಇದೇ ವೇಳೆ ನಿವೃತ್ತ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.

ಬಿಇಒ ದೇವರಾಜು, ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್, ತಾಪಂ ಇಒ ಗಿರೀಧರ್, ಸಿಪಿಐ ರಘುಪತಿ, ಪಪಂ ಮುಖ್ಯಾಧಿಕಾರಿ ಸವಿತಾ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜೇಗೌಡ, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜು ಇತರರಿದ್ದರು.