ರಮೇಶ ಹಾರ್ಸಿಮನೆ ಸಿದ್ದಾಪುರ
ಶಿಕ್ಷಕರು ಶಾಲೆಗೆ ಬರುತ್ತಿದ್ದಾರೆ. ಆದರೆ, ಪಾಠ ಹೇಳಿಕೊಡಲು ಮಕ್ಕಳೇ ಇಲ್ಲ. ಏಕೆಂದರೆ, ಕರೊನಾ ಹಾವಳಿ. ಮತ್ತೇನು ಮಾಡಬೇಕು? ಇಂಥ ಸಂದರ್ಭದಲ್ಲಿ, ಸಿದ್ದಾಪುರ ತಾಲೂಕಿನ ಬೇಡ್ಕಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಹೊಳೆದದ್ದು ವಿನೂತನ ಆಲೋಚನೆ. ಅದನ್ನು ತಕ್ಷಣವೇ ಕಾರ್ಯರೂಪಕ್ಕೆ ತಂದೇ ಬಿಟ್ಟಿದ್ದಾರೆ.
ಶಾಲೆಯ ಹಳೆಯ ಪೀಠೋಪಕರಣಗಳಿಗೆ ಬಣ್ಣ ಬಳಿದು ಸುಂದರಗೊಳಿಸುವ ಕೆಲಸ ಇದು!
ಶಾಲಾ ಮುಖ್ಯಾಧ್ಯಾಪಕ ಕೆ.ಪಿ.ರವಿ, ಸಹಶಿಕ್ಷಕರಾದ ಕರುಣಾ ಎಂ.ಶೇಟ್, ವಂದನಾ ಕಲಭಾಗ, ಇಂದಿರಾ ಪಾವಸ್ಕರ್, ಸಂಧ್ಯಾಬಾಯಿ ಪಿನ್ನುಮನೆ ಹಾಗೂ ಮಹಾದೇವಿ ಪಟಗಾರ ಅವರು ಶಾಲೆಯಲ್ಲಿ ಎಷ್ಟೋ ವರ್ಷಗಳಿಂದ ಇದ್ದ ತುಕ್ಕು ಹಿಡಿಯಲಾರಂಬಿಸಿದ್ದ ಕಬ್ಬಿಣದ ಡೆಸ್ಕ್, ಟೇಬಲ್, ಅಲ್ಮೇರಾಗಳಿಗೆ ಬ್ರೆಷ್ ಹಾಗೂ ರೋಲರ್ನಿಂದ ಬಣ್ಣ ಹೊಡೆದು ಹೊಸ ರೂಪ ನೀಡಿದ್ದಾರೆ.
ಇವರೊಂದಿಗೆ ಶಾಲಾ ಅಡುಗೆ ಸಿಬ್ಬಂದಿಯಾದ ಇಂದಿರಾ ನಾಯ್ಕ, ಕುಮುದಾ ಚನ್ನಯ್ಯ, ಸುಜಾತ ನಾಯ್ಕ ಅವರೂ ಬ್ರೆಷ್ ಹಿಡಿದು ಬಣ್ಣ ಹೊಡೆದು ಶಿಕ್ಷಕರಿಗೆ ಸಹಕರಿಸಿದ್ದಾರೆ. ಕರೊನಾ ನಿಯಮಾವಳಿ ಮೀರದೆ ಎಲ್ಲರೂ ಮಾಸ್ಕ್ ಧರಿಸಿ ಪರಸ್ಪರ ಅಂತರ ಕಾಯ್ದುಕೊಳ್ಳುವುದರ ಮೂಲಕ ಕೆಲಸ ಮಾಡಿರುವುದು ವಿಶೇಷವಾಗಿದೆ.
ಪ್ರತಿನಿತ್ಯ ಶಾಲೆಗೆ ಬಂದು ಮಕ್ಕಳಿಲ್ಲದೆ ಹಾಗೆಯೇ ಇಡೀ ದಿನ ಕುಳಿತು ಹೋಗಬೇಕಾದ ಸ್ಥಿತಿ. ಈ ವೇಳೆ ಶಿಕ್ಷಕರ ಬಳಿ ಶಾಲೆಯ ಡೆಸ್ಕ್, ಬೆಂಚ್, ಅಲ್ಮೇರಾಗಳಿಗೆ ಬಣ್ಣ ಹಚ್ಚುವ ವಿಷಯ ಪ್ರಸ್ತಾಪಿಸಿದಾಗ ಎಲ್ಲರೂ ಸಂತಸದಿಂದ ಒಪ್ಪಿದರು. ನಮ್ಮೊಂದಿಗೆ ಅಡುಗೆ ಸಿಬ್ಬಂದಿ ಕೈಜೋಡಿಸಿ ಸಹಕರಿಸಿದ್ದಾರೆ. ಎಲ್ಲರೂ ಕೂಡಿ ಕೆಲಸ ಮಾಡಿದ್ದೇವೆ. ಬಿಇಒ ಸದಾನಂದ ಸ್ವಾಮಿ ನಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. | ಕೆ.ಪಿ. ರವಿ ಮುಖ್ಯಾಧ್ಯಾಪಕ ಸಹಿಪ್ರಾ ಶಾಲೆ ಬೇಡ್ಕಣಿ
ಜೂನ್ ಹಾಗೂ ಜುಲೈ ತಿಂಗಳಲ್ಲಿ ಶಾಲೆಗೆ ಬಂದ ಶಿಕ್ಷಕರು ಸುಮ್ಮನೆ ಕುಳಿತುಕೊಳ್ಳದೆ ಅವುಗಳಿಗೆ ಬಣ್ಣ ಹಚ್ಚಿ ಹೊಸ ಪೀಠೋಪಕರಣದಂತೆ ಮಾಡಿ ಇನ್ನೂ ಹತ್ತಾರು ವರ್ಷ ಉಪಯೋಗಕ್ಕೆ ಬರುವಂತೆ ಮಾಡಿರುವುದು ಶ್ಲಾಘನೀಯವಾಗಿದೆ. | ಬಿ.ಎನ್. ಜಯಪ್ರಕಾಶ ಎಸ್ಡಿಎಂಸಿ ಅಧ್ಯಕ್ಷ, ಬೇಡ್ಕಣಿ ಸಹಿಪ್ರಾ ಶಾಲೆ