ಜಿಲ್ಲೆ

ಪಾಠ ಪ್ರವಚನಗಳ ಜತೆಗೆ ಕ್ರೀಡೆಯೂ ಮುಖ್ಯ

ಮದ್ದೂರು: ಕ್ರೀಡೆ ಬದುಕಿನ ಅವಿಭಾಜ್ಯ ಅಂಗ, ವಿದ್ಯಾರ್ಥಿಗಳಿಗೆ ಪಾಠ, ಪ್ರವಚನಗಳ ಜತೆಗೆ ಕ್ರೀಡೆಯೂ ಮುಖ್ಯವಾದುದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಅಭಿಪ್ರಾಯಪಟ್ಟರು.


ತಾಲೂಕಿನ ಕೊಪ್ಪದ ಸರ್ಕಾರಿ ಪ್ರಥಮ ಕಾಲೇಜಿನಲ್ಲಿ ಗುರುವಾರ ಜರುಗಿದ ಮಾಂಡವ್ಯ ವಲಯದ ಕ್ರೀಡಾ ಪ್ರತಿನಿಧಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.


ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳಿಗೆ ಸಿಗುತ್ತಿರುವ ಉತ್ತೇಜನ ನಿರೀಕ್ಷಿತ ಮಟ್ಟದಲ್ಲಿಲ್ಲ. ಕ್ರೀಡೆಗಳು ಇಂದು ಬದುಕನ್ನೇ ಬದಲಿಸಿದ ಸಾವಿರಾರು ಉದಾಹರಣೆಗಳು ಇರುವಾಗ ಕ್ರೀಡೆಗೆ ಉತ್ತೇಜನ ದೊರಕಿದರೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಈ ದೆಸೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರು ಕ್ರಮವಹಿಸಲು ಮುಂದಾಗಬೇಕೆಂದರು.


ಕ್ರೀಡೆಗಳೆಂದರೆ ಕೇವಲ ಆಟವಲ್ಲ, ಬದುಕನ್ನೇ ಕಟ್ಟಿಕೊಟ್ಟಿರುವ ಸಾವಿರಾರು ಉದಾಹರಣೆಗಳು ನಡೆಯುತ್ತಲೇ ಇವೆ. ಹಾಗಾಗಿ, ಕ್ರೀಡೆಗಳನ್ನು ಕಡೆಗಣಿಸಬೇಡಿ ಎಂದು ಕಿವಿಮಾತು ಹೇಳಿದರು.


ಮಾಂಡವ್ಯ ವಲಯದ ಸಂಚಾಲಕ ಶ್ರೀನಿವಾಸ್ ವಲಯದ ಚಟುವಟಿಕೆಗಳು, ಕಾರ್ಯಸೂಚಿಗಳನ್ನು ಕುರಿತು ಮಾತನಾಡಿದರು. ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್, ಇತಿಹಾಸ ವಿಭಾಗದ ಮುಖ್ಯಸ್ಥ ಕೆ.ವಿ.ಜಯರಾಮ್, ಸಮಾಜಶಾಸ್ತ್ರ ವಿಭಾಗದ ಕುಮಾರ್ ಹಾಗೂ ಅಪ್ಪಾಜಯ್ಯ,ಲೋಕೇಶ್, ರವಿ ಇತರರಿದ್ದರು.