ಜಿಲ್ಲೆ

ಪಾಚಿಕಟ್ಟಿದ ನೀರಿನ ಪೂರೈಕೆ ದೂರು, ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ಪರಿಶೀಲನೆ

ಚಿಂತಾಮಣಿ: ಟ್ಯಾಂಕರ್ ಮೂಲಕ ನೀರು ಸರಬರಾಜಿನಲ್ಲಿ ಅವ್ಯವಹಾರ ಹಾಗೂ ಕೃಷಿ ಹೊಂಡದ ಪಾಚಿಕಟ್ಟಿದ ನೀರು ಪೂರೈಕೆಯು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಪರಿಶೀಲಿಸಿ ವರದಿಯನ್ನು ಸಲ್ಲಿಸುವಂತೆ ಕೋರಿ ಚಿಕ್ಕಬಳ್ಳಾಪುರ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಎಂ.ರೇಣುಕಾರವರು ನಾಲ್ಕು ಮಂದಿಯ ತಂಡವನ್ನು ರಚನೆ ಮಾಡಿದ್ದು ಆ ತಂಡ ಇಂದು ಚಿಂತಾಮಣಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಟ್ಯಾಂಕರ್ ನೀರಿನ ಸರಬರಾಜಿನಲ್ಲಿನ ಅವ್ಯವಹಾರ ಹಾಗೂ ಕೃಷಿ ಹೊಂಡ ಕಲುಷಿತ ನೀರಿನ ಪೂರೈಕೆ ಮಾಡಲಾಗುತ್ತಿದೆ ಎಂದು ನಗರಸಭೆ ಸದಸ್ಯರಾದ ಸುಭಾಷನಿ ಶೇಷರೆಡ್ಡಿ, ಗೀತಾ ಆನಂದ್, ಹರೀಶ್, ಜಗದೀಶ್, ಸುಮಿತ್ರಾ ಮಂಜುನಾಥ್ ಹಾಗೂ ಮಹಮ್ಮದ್ ಗೌಸ್ ಪತ್ತೆ ಹಚ್ಚಿದ್ದರು, ಅಷ್ಟೇ ಅಲ್ಲದೆ ನಗರಾಭಿವೃದ್ದಿ ಕೋಶದ ಜಿಲ್ಲಾ ಯೋಜನಾ ಕಚೇರಿಯ ವ್ಯವಸ್ಥಾಪಕ ಸತ್ಯನಾರಾಯಣ ಅವರಿಗೆ ಸಾಕ್ಷಿ ಸಮೇತ ದೃಢಪಡಿಸಿದ್ದರು.

ಜಿಲ್ಲಾ ನಗರಾಭಿವೃದ್ದಿ ಕೋಶಕ್ಕೆ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಕೋಶದ ಯೋಜನಾ ನಿರ್ದೇಶಕಿ ಎಂ.ರೇಣುಕಾ ಅವರು, ಚಿಕ್ಕಬಳ್ಳಾಪುರ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಡಿ.ಎನ್.ಮಾಧವ ಅಧ್ಯಕ್ಷತೆಯಲ್ಲಿ, ಚಿಕ್ಕಬಳ್ಳಾಪುರ ಕರ್ನಾಟಕ ನೀರು ಸರಬರಾಜು ಮಂಡಳಿಯ ಸಹಾಯಕ ಅಭಿಯಂತರ ಎಸ್.ಆಂಜಂ, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಚೇರಿ ವ್ಯವ ಸ್ಥಾಪಕ ವೈ.ಎನ್.ಸತ್ಯನಾರಾಯುಣ್, ಚಿಕ್ಕಬಳ್ಳಾಪುರ ನಗರಸಭೆ ಕಿರಿಯ ಕಾರ್ಯಪಾಲಕ (ಕ್ಷೇಮಾಭಿವೃದ್ಧಿ) ರಾಮಚಂದ್ರಪ್ಪ ಅವರ ತಂಡವನ್ನು ನೇಮಿಸಿದ್ದರು.

ಈ ತಂಡ ಕುಡಿಯುವ ನೀರು ಸರಬರಾಜು ಮಾಡುವ ಕೃಷಿ ಹೊಂಡಗಳು, ನೀರು ಸರಬರಾಜು ಕೇಂದ್ರಗಳು, ಟ್ರ್ಯಾಕ್ಟರ್‌ಗೆ ಅಳವಡಿಸಿರುವ ಜಿಪಿಎಸ್ ಸೇರಿ ಎಲ್ಲವನ್ನು ಪರಿಶೀಲನೆ ನಡೆಸಿದ್ದು, ವರದಿ ಸಲ್ಲಿಸುವುದಾಗಿ ತಿಳಿಸಿದೆ.