ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಪಾಂಡವಪುರದಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಎಚ್.ಎನ್.ಮಂಜುನಾಥ್, ಪ.ಮ.ರಮೇಶ್, ಶಾಂತಿಪ್ರಸಾದ್, ಎನ್.ಭಾಸ್ಕರ್, ಕುಮಾರನಾಯಕ, ಎಚ್.ಕೆ.ದೊರೆಸ್ವಾಮಿ ಇತರರು ಇದ್ದರು. 
ಜಿಲ್ಲೆ

ಪಾಂಡವಪುರದಲ್ಲಿ ರೈತರ ಪ್ರತಿಭಟನೆ

ಪಾಂಡವಪುರ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ರೈತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಡಾ.ರಾಜ್‌ಕುಮರ್ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಜಾಗಟೆ ಬಾರಿಸುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸರ್ಕಾರದ ನಿಲುವುಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ತಕ್ಷಣದಿಂದಲೇ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ಸ್ಥಗಿತಗೊಳಿಸಬೇಕು. ರೈತರಿಗೆ ಅನುಕೂಲವಾಗುವಂತೆ ಅಚ್ಚಕಟ್ಟು ವ್ಯಾಪ್ತಿಯ ಎಲ್ಲ ನಾಲೆಗಳಿಗೆ ನೀರು ಹರಿಸಬೇಕು. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸೂಚನೆಯಂತೆ ರೈತರು ಬೆಳೆ ಬೆಳೆದಿದ್ದಾರೆ. ನೀರಿಲ್ಲದೆ ಒಣಗಿದರೆ ಅದರ ನಷ್ಟವನ್ನು ಸರ್ಕಾರವೇ ನೀಡಬೇಕಾಗುತ್ತದೆ ಎಂದರು.

ಅರ್ಜಿ ವಿಚಾರಣೆವರೆಗೂ ಇದೇ ರೀತಿ ತಮಿಳುನಾಡಿಗೆ ನೀರು ಹರಿದರೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ. ಹೀಗಾಗಿ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಜಿಲ್ಲೆಯ ಎಲ್ಲ ಶಾಸಕರು ಪ್ರತಿಭಟನೆ ನೇತೃತ್ವ ವಹಿಸಿ ರೈತರ ಪರವಾಗಿ ನಿಲ್ಲುವ ಮೂಲಕ ರಾಜ್ಯದ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ಪ.ಮ.ರಮೇಶ್, ಶಾಂತಿಪ್ರಸಾದ್, ಎನ್.ಭಾಸ್ಕರ್, ಕುಮಾರನಾಯಕ, ಎಚ್.ಕೆ.ದೊರೆಸ್ವಾಮಿ, ಹೊನ್ನಗಿರಿಗೌಡ, ಎಚ್.ಎನ್.ನಾರಾಯಣಗೌಡ ಇತರರು ಇದ್ದರು.