ಪಾಂಡವಪುರದಲ್ಲಿ ಬಿಜೆಪಿ ರೈತಮೋರ್ಚಾ ಕಾರ್ಯಕರ್ತರು ತಾಲೂಕು ಆಡಳಿತ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಡಾ.ಎನ್.ಎಸ್.ಇಂದ್ರೇಶ್, ಜೆ.ಶಿವಲಿಂಗೇಗೌಡ, ಮಂಗಳಾ ನವೀನ್‌ಕುಮಾರ್, ಎಲ್.ಅಶೋಕ್ ಇತರರು ಇದ್ದರು.  
ಜಿಲ್ಲೆ

ಪಾಂಡವಪುರದಲ್ಲಿ ತಾಲೂಕು ಕಚೇರಿಗೆ ಮುತ್ತಿಗೆ

ಪಾಂಡವಪುರ: ತಮಿಳುನಾಡು ಸರ್ಕಾರ ನೀರು ಕೇಳುವ ಮೊದಲೇ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಹರಿಸುವ ಉದಾರತೆ ತೋರುವ ಮೂಲಕ ರಾಜ್ಯದ ರೈತರಿಗೆ ರಾಜ್ಯ ಸರ್ಕಾರ ದ್ರೋಹ ಮಾಡಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಹೆದ್ದಾರಿ ಸಂಚಾರ ತಡೆಯುವುದರ ಜತೆಗೆ ತಾಲೂಕು ಕಚೇರಿ ಮುತ್ತಿಗೆ ಹಾಕಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಐದು ದೀಪಗಳ ವೃತ್ತದಲ್ಲಿ ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್ ನೇತೃತ್ವದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಜಿಲ್ಲೆಗೊಂದು ಗೋ ಶಾಲೆ, ಎಪಿಎಂಸಿ ಕಾಯ್ದೆ, ಕೃಷಿ ಭೂಮಿ ಮಾರಾಟ ಕಾಯ್ದೆ, ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈಬಿಡುವ ಮೂಲಕ ರಾಜ್ಯದ ಜನರನ್ನು ವಂಚಿಸುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ರೈತರ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದು ಜನರಿಗೆ ಯಾವ್ಯಾವ ರೀತಿಯಲ್ಲಿ ಮೋಸ ಮಾಡುತ್ತಿದೆ ಎಂಬುದನ್ನು ಜನರ ಮುಂದೆ ಇಡಲಾಗುತ್ತಿದೆ. ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೈತರಿಗೆ ನೀಡುತ್ತಿದ್ದ 4 ಸಾವಿರ ಸಹಾಯಧನವನ್ನು ರದ್ದು ಮಾಡುತ್ತಿರಲಿಲ್ಲ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಜೆ.ಶಿವಲಿಂಗೇಗೌಡ, ರೈತಮೋರ್ಚಾ ತಾಲೂಕು ಅಧ್ಯಕ್ಷ ಕನ್ನಂಬಾಡಿ ಸುರೇಶ್, ಕ್ಷೇತ್ರಾಧ್ಯಕ್ಷ ಎಲ್.ಅಶೋಕ್, ಮಹಿಳಾಧ್ಯಕ್ಷೆ ಮಂಗಳಾ ನವೀನ್‌ಕುಮಾರ್, ಟೌನ್ ಅಧ್ಯಕ್ಷ ಶ್ರೀನಿವಾಸ್ ನಾಯಕ, ಆಟೋ ಮಲ್ಲೇಶ್, ಡೇರಿ ರಾಮು, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಮಧು ಇತರರು ಇದ್ದರು.