ಹಾಸನ: ಗುರುವಾರ ನಡೆಯುವ ಪಾಂಚಜನ್ಯ ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಭವ್ಯ ಶೋಭಯಾತ್ರೆ ಅಂಗವಾಗಿ ಮಂಗಳವಾರ ಸಂಜೆ ನಡೆದ ಜಾಗೃತಿ ಬೃಹತ್ ಬೈಕ್ ರ‌್ಯಾಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ತಾರನಾಥ್ ಕೇಸರಿ ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಪಾಂಚಜನ್ಯ ಹಿಂದು ಗಣಪತಿ ಸಮಿತಿ ಅಧ್ಯಕ್ಷ ವಾಸು, ಇವತ್ತು ಹಿಂದುಗಳನ್ನು ಜಾಗೃತಿ ಮಾಡುವಂತಹ ಕಾಲ ಬಂದಿದ್ದು, ಈ ನಿಟ್ಟಿನಲ್ಲಿ ಇಡೀ ನಗರವನ್ನು ಕೇಸರಿಕರಣ ಮಾಡಲಾಗಿದೆ. ಹಿಂದುಗಳನ್ನು ಜಾಗೃತಿ ಮಾಡುವ ಸಲುವಾಗಿ ನಾನಾ ರೀತಿಯ ಪೋಸ್ಟರ್‌ಗಳನ್ನು ಅಂಟಿಸಲಾಗುತ್ತಿದೆ. ಬಾಲಗಂಗಾಧರ ತಿಲಕ್ ಅವರು ಸ್ವತಂತ್ರದ ಸಮಯದಲ್ಲಿ ಜನರನ್ನು ಒಗ್ಗೂಡಿಸಲು ಗಣೇಶ ಉತ್ಸವ ಮಾಡಿದಂತೆ, ಪಾಂಚಜನ್ಯ ಗಣಪತಿ ಹಾಸನದಲ್ಲಿಯೂ ಹಿಂದುಗಳ ಒಗ್ಗೂಡಿಸುವ ಸಲುವಾಗಿ ಇಂತಹ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಕಳೆದ 15 ವರ್ಷದಿಂದ ಪಾಂಚಜನ್ಯ ಹಿಂದು ಗಣಪತಿ ಉತ್ಸವ ನಡೆಸಿಕೊಂಡು ಬರಲಾಗುತ್ತಿದ್ದು, ಸೆ.7ರಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಗಣಪತಿ ಮೂರ್ತಿಯನ್ನು ಅದ್ಧೂರಿಯಾಗಿ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿನಿತ್ಯ ಮಧ್ಯಾಹ್ನ 12 ಗಂಟೆಗೆ ಹಾಗೂ ಸಂಜೆ 8 ಗಂಟೆಗೆ ಮಹಾಮಂಗಳಾರತಿ ನಡೆದು ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಸೆ.12ರಂದು ಆಕರ್ಷಕ ಮೆರವಣಿಗೆ ಮೂಲಕ ವಿಸರ್ಜಿಸಲಾಗುವುದು ಎಂದರು.
ಇದೆ ವೇಳೆ ಪಾಂಚಜನ್ಯ ಹಿಂದು ಗಣಪತಿ ಸಮಿತಿ ಕಾರ್ಯದರ್ಶಿ ವೇಣುಗೋಪಾಲ್, ರವಿಸೋಮು, ಖಜಾಂಚಿ ಲಾವಣ್ಯಾ, ನಿರ್ದೇಶಕ ಶರತ್, ರಕ್ಷಿತ್ ಭಾರಧ್ವಜ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಆರ್‌ಎಸ್‌ಎಸ್ ಮುಖಂಡರಾದ ಮೋಹನ್, ಶೋಬನ್ ಬಾಬು, ವಿಶಾಲ್ ಅಗರವಾಲ್, ಮೋಹನ್ ಇತರರು ಉಪಸ್ಥಿತರಿದ್ದರು.