ಚಾಮರಾಜನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದನಾ ದಾಳಿಯನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಪ್ರತಿಭಟನೆ ನಡೆಸಿದರು, ಉಗ್ರರ ವಿರುದ್ಧ ೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸ್‌ಗೌಡ ಮಾತನಾಡಿ, ಪ್ರವಾಸಿಗರ ನೆಚ್ಚಿನ ತಾಣವಾದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿನಡೆಸಿರುವುದು ಅತ್ಯಂತ ಖಂಡನೀಯ. ದೇಶದ ಯಾವ ಮೂಲೆಯಲ್ಲಾದರೂ ಉಗ್ರಗಾಮಿಗಳು ಅಡಗಿ ಕುಳಿತಿದ್ದರೂ ಸಹ, ಅವರನ್ನು ಸಂಪೂರ್ಣವಾಗಿ ಮಟ್ಟಹಾಕಬೇಕು. ಕೇಂದ್ರ ಸರ್ಕಾರ ಈ ಕುರಿತು ಕಠಣವಾದ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಭಯೋತ್ಪಾದನೆಯಂತಹ ವಿಚಾರಗಳು ಬಂದಾಗ ದೇಶದಲ್ಲಿರುವ ಸರ್ವ ಪಕ್ಷಗಳು ಹಾಗೂ ಪ್ರತಿಯೊಬ್ಬ ಭಾರತೀಯರು ಒಗ್ಗಟ್ಟಾಗಬೇಕಿದೆ. ಆಗಾದಾಗ ಮಾತ್ರ ಉಗ್ರರನ್ನು ನಿರ್ನಾಮ ಮಾಡಬಹುದಾಗಿದೆ. ಈ ವೇಳೆಯಲ್ಲಿ ಕೇಂದ್ರ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ. ಆದರೆ ದೇಶದಲ್ಲಿ ಸಂಪೂರ್ಣ ವಾಗಿ ಉಗ್ರರನ್ನು ಮಟ್ಟಹಾಕಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರರಾದ ನಿಜಧ್ವನಿಗೋವಿಂದರಾಜು, ಪಣ್ಯದಹುಂಡಿ ರಾಜು, ಮುತ್ತಿಗೆ ಗೋವಿಂದರಾಜು, ಮಹೇಶ್ ಗೌಡ, ರಾಜಪ್ಪ, ಸಿದ್ದರಾಜು, ಲಿಂಗರಾಜು, ತಾಂಡವಮೂರ್ತಿ, ವೀರಭದ್ರ ಹಾಗೂ ಇತರರು ಭಾಗವಹಿಸಿದ್ದರು.