ಬಾಗಲಕೋಟೆ: ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ ಪ್ರವಾಹ, ನೆರೆಪೀಡಿತ, ಬೆಳೆವಿಮೆ, ಸಾಲ ಮನ್ನಾ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ತಾಲೂಕಿನ ಯಡಹಳ್ಳಿ, ಸೋರಕೊಪ್ಪ, ಛಬ್ಬಿ, ಸೊಕನಾದಗಿ, ಹೊನ್ನರಹಳ್ಳಿ, ಸಿಂಧಗಿ, ನಕ್ಕರಗುಂದಿ ಗ್ರಾಮಗಳ ಎಲ್ಲ ರೈತರು ತಮ್ಮ ಪಹಣಿ (ಉತಾರೆ)ಗೆ ಆಧಾರ ಜೋಡಣೆ ಮಾಡಿಸಿಕೊಳ್ಳಬೇಕೆಂದು ಗ್ರಾಮ ಆಡಳಿತಾಧಿಕಾರಿ ರವಿ ಚಲವಾದಿ ತಿಳಿಸಿದ್ದಾರೆ.
ಈಗಾಗಲೇ ಸರಕಾರ ಹೊಸ ತಂತ್ರಾಂಶ ಅಭಿವೃದ್ದಿ ಪಡಿಸಿದ್ದು, ಅದನ್ನು ರೈತರು ತಮ್ಮ ಮೊಬೈಲ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇಲ್ಲದಿದ್ದಲ್ಲಿ ನೇರವಾಗಿ ತಮ್ಮ ಕಚೇರಿಗೆ ಭೇಟಿ ನೀಡಿ ಲಿಂಕ್ ಪಡೆದುಕೊಳ್ಳಲು ತಿಳಿಸಿದರು. ರೈತರು ಈ ಕಾರ್ಯ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವದಿಲ್ಲ. ಪಹಣಿಗೆ ಆಧಾರ ಕಾರ್ಡ ಜೋಡಣೆ ಮಾಡಿಕೊಂಡರೆ ನಿಮ್ಮ ಜಮೀನಿನಿ ದಾಖಲೆಗಳು ಸುರಕ್ಷಿತವಾಗಿರುತ್ತವೆ. ಸಾಲ ಸೌಲಭ್ಯ ಪಡೆದುಕೊಳ್ಳುವಲ್ಲಿ ಸಹಕಾರವಾಗುತ್ತದೆ. ಈ ಅವಕಾಶ ಜುಲೈ ತಿಂಗಳ ಕೊನೆಯ ವಾರದ ವರೆಗೆ ಮೇಲ್ಕಾಣಿಸಿದ ಎಲ್ಲ ಗ್ರಾಮಗಳ ರೈತರು ತಮ್ಮ ಪಹಣಿಗೆ ಆಧಾರ ಜೋಡಣೆ ಮಾಡಿಸಿಕೊಳ್ಳಬೇಕು.