ಜಿಲ್ಲೆ

ಪಶು ಇಲಾಖೆ ವಿರುದ್ಧ ಗ್ರಾಮಸ್ಥರ ಅಸಮಾಧಾನ

ಅರಟಾಳ: ಗ್ರಾಮದಲ್ಲಿ ಉದ್ಘಾಟನೆಗೊಂಡ ಪಶು ಆಸ್ಪತ್ರೆ ಕೆಲವೇ ದಿನಗಳಲ್ಲಿ ಮುಚ್ಚಲಾಗಿದೆ. ಇದುವರೆಗೂ ಬಾಗಿಲು ತೆರೆದಿಲ್ಲ. ವೈದ್ಯರು ಯಾರು ಎಂಬುದು ತಿಳಿದಿಲ್ಲ. ಆಸ್ಪತ್ರೆಗೆ ಹಂಚಿಕೆ ಮಾಡಿರುವ ಔಷಧ

ಎಲ್ಲಿ ಹೋದವು ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಗ್ರಾಮದ ಶ್ರೀ ಮಾಳಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರು ಪಶು ಆಸ್ಪತ್ರೆ ಇದ್ದು ಇಲ್ಲದಂತಾಗಿದೆ. ಪಶು ಆಸ್ಪತ್ರೆಗೆ ನೇಮಕವಾದ ವೈದ್ಯ ಯಾರೆಂಬುವುದನ್ನು ತಿಳಿಸಿ ಎಂದು ಅಸಮಾಧಾನ ಹೊರಹಾಕಿದರು.

ಅರಟಾಳ, ಬಾಡಗಿ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ಅರ್ಧದಲ್ಲಿ ನಿಂತಿದೆ. ಜನರಿಗೆ ಅರಣ್ಯ ಇಲಾಖೆಯಿಂದ ಮಾಹಿತಿ ಸಿಗುತ್ತಿಲ್ಲ. ಗ್ರಾಮಕ್ಕೆ ಪ್ರೌಢಶಾಲೆ ಅವಶ್ಯವಾಗಿದೆ. ಸಂಬಂದಿಸಿದ ಇಲಾಖೆಗೆ ಠರಾವ್ ಕಳಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಥಣಿ ರೇಷ್ಮೆ ಇಲಾಖೆ ನೋಡಲ್ ಅಧಿಕಾರಿ ಮಹಾತೇಶ ಪಾಟೀಲ ಮಾತನಾಡಿ, ಸಾರ್ವಜನಿಕರಿಂದ ಬಂದ ಮಾಹಿತಿಯನ್ನು ಸಂಬಂದಿಸಿದ ಇಲಾಖೆಗೆ ಗ್ರಾಮ ಪಂಚಾಯಿತಿ ಠರಾವ್ ಹಾಕಿ ಕಳಿಸಲಾಗುವುದು. ಸಾರ್ವಜನಿಕರ ಕುಂದು-ಕೊರತೆ ಪರಿಶೀಲಿಸಲಾಗುವುದು. ಸಭೆಗೆ ಗೈರಾದ ಅಧಿಕಾರಿಗಳಿಗೆ ಠರಾವ್ ಹಾಕಿ ನೋಟಿಸ್ ಕೊಡಲಾಗುವುದು ಎಂದರು.

ಗ್ರಾಮದಲ್ಲಿರುವ ವೃದ್ಧರು, ಅಂಗವಿಕಲರ ಮಾಸಾಶನ ಪಡೆದುಕೊಳ್ಳುತ್ತಿರುವವರ ಮಾಹಿತಿಯನ್ನು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಪಂಚಾಯಿತಿಗೆ ಒದಗಿಸಬೇಕು ಎಂದು ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ ಹೇಳಿದರು.

ಗ್ರಾಪಂ ಅಧ್ಯಕ್ಷೆ ಕಾಂತಾಬಾಯಿ ಹಟ್ಟಿ, ಪಿಡಿಒ ಎ.ಜಿ.ಎಡಕೆ, ಸದಾಶಿವ ಸನದಿ, ತೆಲಸಂಗ ಎಸ್‌ಒ ಬಿ.ಜಿ.ಬಾಳಿಕಾಯಿ, ಮೇಲ್ವಿಚಾರಕಿ ಎಸ್.ಬಿ. ಮಗದುಮ್, ಎಸ್.ಜಿ.ಭಜಂತ್ರಿ, ಪೂರ್ಣಿಮಾ ಅಂಕಲಗಿ, ಅನ್ನಪೂರ್ಣಾ ಮುಧೋಳ, ಸರಸ್ವತಿ ಕಾಂಬಳೆ, ಗ್ರಾಮ ಲೆಕ್ಕಾಧಿಕಾರಿ ಪ್ರವೀಣಕುಮಾರ ಎಚ್., ತಾಪಂ ಮಾಜಿ ಸದಸ್ಯ ಶಿವಪ್ಪ ಹಟ್ಟಿ, ಸಿದ್ದು ಹಳ್ಳಿ, ಎಸ್.ಎಂ.ಸಾವಳಗಿ, ಶಂಕರ ಹಟ್ಟಿ, ವಿಠ್ಠಲ ಹಟ್ಟಿ, ಎಸ್.ಎಂ.ಕುಂಬಾರ, ನಿಂಗಪ್ಪ ಕಾಂಬಳೆ, ದೀಪಕ ಬೋಜಾಪಗೋಳ, ಹನುಮಂತ ಹಟ್ಟಿ, ಮಲ್ಲಿಕಾರ್ಜುನ ತೆಲಸಂಗ, ಮಲ್ಲಿಕಾರ್ಜುನ ಪೂಜಾರಿ ಇತರರಿದ್ದರು.