ಜಿಲ್ಲೆ

ಪವಿತ್ರವಾದ ಮತದಾನಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಿ: ನ್ಯಾ.ಟಿ.ಎನ್. ಇನಬಳ್ಳಿ

ಹಾಸನ : ಮತದಾನ ಪವಿತ್ರವಾದದ್ದು. ಉತ್ತಮ ಸರ್ಕಾರ ರಚನೆಗೆ ಮತದಾನದ ಕೊಡುಗೆ ಅಧಿಕ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಎನ್. ಇನವಳ್ಳಿ ಅವರು ತಿಳಿಸಿದರು.

ಹಾಸನದ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಮತದಾರರ ಜಾಗೃತಿ ವೇದಿಕೆ ಉದ್ಘಾಟಿಸಿ ಮಾತನಾಡಿದ ಟಿ.ಎನ್.ಇನವಳ್ಳಿ ಅವರು ಕರ್ನಾಟಕ ಹೈಕೋರ್ಟ್ ನಿರ್ದೇಶನದ ಅನ್ವಯ ಪ್ರತಿ ಜಿಲ್ಲೆಯ ನ್ಯಾಯಾಲಯದಲ್ಲಿ ಮತದಾರರ ಜಾಗೃತಿ ವೇದಿಕೆ ರಚಿಸಿ ಆ ಮೂಲಕ ಸಿಬ್ಬಂದಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸಂವಿಧಾನವು ಚುನಾವಣಾ ಪ್ರಕ್ರಿಯೆಯನ್ನು ತಿಳಿಸಿದ್ದು ಅದರಲ್ಲಿ ಮತದಾನಕ್ಕೆ ಮಹತ್ತರ ಸ್ಥಾನವಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ರಹಸ್ಯ ಮತದಾನ ಮಾಡಿ ಉತ್ತಮ ಸರ್ಕಾರ ರಚಿಸುವಲ್ಲಿ ಮತ ವ್ಯವಸ್ಥೆಯ ಮೌಲ್ಯವನ್ನು ಅಧಿಕಗೊಳಿಸಬೇಕು ಎಂದು ಕರೆ ನೀಡಿದರು.

ಸಂವಿಧಾನದ ಅನುಚ್ಛೇದ 324 ರಿಂದ 329 ರವರೆಗೆ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ವಿವರಣೆ ನೀಡಲಾಗಿದೆ. ಚುನಾವಣಾ ಆಯೋಗದ ರಚನೆ ಅದರ ಕಾರ್ಯ ಇವುಗಳ ಬಗ್ಗೆ ಹೇಳಲಾಗಿದೆ. ಸಂವಿಧಾನಿಕವಾಗಿ ಮತದಾನ ನಮ್ಮ ಹಕ್ಕಾಗಿದೆ. ಅದಕ್ಕೆ ಚ್ಯುತಿ ಬರದಂತೆ ಮತ ಚಲಾಯಿಸಬೇಕೆಂದು ನ್ಯಾಯಾಲಯ ಸಿಬ್ಬಂದಿಗೆ ಅರಿವು ಮೂಡಿಸಿದರು.

ಮತದಾರರ ಜಾಗೃತಿ ವೇದಿಕೆಯ ನೋಡಲ್ ಅಧಿಕಾರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಯವರಾದ ಬಿ.ಕೆ. ರವಿಕಾಂತ ಮಾತನಾಡಿ, ಮತದಾನವು ಮೌಲ್ಯಯುತವಾದದ್ದು. ಅದನ್ನು ಆಸೆ-ಆಮಿಷಗಳಿಗೆ ಮಾರಿಕೊಳ್ಳದೆ ಪ್ರಾಮಾಣಿಕವಾಗಿ ಚಲಾಯಿಸಬೇಕು. ಆಗ ಮಾತ್ರ ಅದಕ್ಕೆ ಬೆಲೆ ಹೆಚ್ಚು. ಪ್ರತಿಯೊಂದು ಮತವು ಕೂಡ ಸರ್ಕಾರ ರಚನೆಯಲ್ಲಿ ಮಹತ್ತರ ಪಾತ್ರ ವಹಿಸಲಿದ್ದು ಚುನಾವಣಾ ಫಲಿತಾಂಶವನ್ನೆ ಬದಲಿಸಬಲ್ಲದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಕಸನಪ್ಪ ನಾಯಕ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎ. ಜಯಪ್ರಕಾಶ್, ಸಿವಿಲ್ ನ್ಯಾಯಾಧೀಶರುಗಳಾದ ಅವಿನಾಶ್ ಚಿಂದು, ಯೋಗಿಶ್, ಸುಷ್ಮಾ, ಶಿಶಿರಾ ಹಾಗೂ ಮುಖ್ಯ ಆಡಳಿತಾಧಿಕಾರಿ ರಾಜ ಅವರು ಉಪಸ್ಥಿತರಿದ್ದರು.