ಹಾಸನ:ಎಲ್ಲ ಧರ್ಮಗಳ ಪವಿತ್ರ ಗ್ರಂಥಗಳು ಸನ್ಮಾರ್ಗದ ಹಾದಿ ತೋರಿಸುತ್ತವೆ. ಪ್ರತಿಯೊಬ್ಬರು ಧಾರ್ಮಿಕ ಗ್ರಂಥಗಳನ್ನು ಓದಿ ಅಂತರಂಗದ ಅರಿವು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬುಧವಾರ ರಾತ್ರಿ ಜಮಾ ಅತೆ ಇಸ್ಲಾಮಿ ಹಿಂದ್ ಸಂಘಟನೆ ಆಶ್ರಯದಲ್ಲಿ ನಡೆದ ಕನ್ನಡದಲ್ಲಿ ಕುರ್ ಆನ್ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಗ್ರಂಥಗಳನ್ನು ಸರಿಯಾಗಿ ಓದಿ ಅರ್ಥೈಸಿಕೊಂಡರೆ ಉತ್ತಮ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬಹುದು. ಆದರೆ ಧಾರ್ಮಿಕ ವಿಚಾರಗಳ ಅರ್ಧಂಬರ್ಧ ತಿಳಿವಳಿಕೆಯಿಂದ ಸಮಾಜಕ್ಕೆ ಅಪಾಯವೇ ಹೆಚ್ಚು ಎಂದು ಎಚ್ಚರಿಸಿದರು.
ಕನ್ನಡದಲ್ಲಿ ಕುರ್ ಆನ್ ಪ್ರವಚನ ನೀಡಿದ ಲಾಲ್ ಹುಸೇನ್ ಕಂದಗಲ್ ಅವರು, ಮಾನವರ ಸೃಷ್ಟಿಕರ್ತ ದೇವರ ದಿವ್ಯವಾಣಿಯಾದ ಕುರ್ ಆನ್ ಗ್ರಂಥವು ಮಾನವ ಜೀವನದ ಎಲ್ಲ ರಂಗಗಳಿಗೂ ಮಾರ್ಗದರ್ಶಕವಾಗಿದೆ. ಕುರ್ ಆನ್ ಸಂದೇಶ ಪಾಲನೆಯಿಂದ ಪರಿಪೂರ್ಣ ವ್ಯಕ್ತಿತ್ವ ಪಡೆಯಬಹುದು. ಹಸಿದವನನ್ನು ಹುಡುಕಿ ಅನ್ನ ನೀಡು ಎಂಬ ಉದಾತ್ತ ಸಂದೇಶವನ್ನು ಕುರ್ ಆನ್ ಸಾರುತ್ತದೆ ಎಂದು ತಿಳಿಸಿದರು.
ಫಾದರ್ ಪ್ಯಾಟ್ರಿಕ್ ಜೋನ್ಸ್ ರಾವ್, ಸಾಹಿತಿ ಅಪ್ಪಾಜಿಗೌಡ, ವಿಕಾಸ್ ಕೊಠಾರಿ, ಭಾರತಿ ಅಸೋಸಿಯೇಟ್ಸ್ ಮುಖ್ಯಸ್ಥ ಜಿ.ಎಂ. ವಿನೋದ್, ಜಮಾ ಅತೆ ಇಸ್ಲಾಮಿ ಹಿಂದ್ ಸಂಘಟನೆ ಜಿಲ್ಲಾಧ್ಯಕ್ಷ ಸದರುಲ್ಲಾ ಖಾನ್, ಸಂಚಾಲಕ ಅಬ್ದುಲ್ ಖಾಲಿದ್ ಮತ್ತಿತರರು ಉಪಸ್ಥಿತರಿದ್ದರು.