ಬೆಳಗಾವಿ: ಕರೊನಾ ಸೋಂಕಿನಿಂದ ಕಂಗೆಟ್ಟಿರುವ ಜನರಿಗೆ ಅತ್ಯಗತ್ಯವಾಗಿರುವ ವೈದ್ಯಕೀಯ ಪರಿಕರಗಳ ದರ ದಿಢೀರ್ ಹೆಚ್ಚಾಗಿರುವುದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಕಾಲ ಕಾಲಕ್ಕೆ ದೇಹದಾರೋಗ್ಯ ಪರಿಶೀಲಿಸಲು ಅಗತ್ಯವಿರುವ ವೈದ್ಯಕೀಯ ಪರಿಕರಗಳು ದುಬಾರಿಯಾಗಿರುವುದರಿಂದ ಜನರು ಕಂಗಾಲಾಗಿದ್ದಾರೆ. ದೇಹದಲ್ಲಿನ ಆಕ್ಸಿಜನ್ ಮಟ್ಟ ಪರಿಶೀಲಿಸುವುದಕ್ಕೆ ಅಗತ್ಯವಿರುವ ‘ಪಲ್ಸ್ ಆಕ್ಸಿಮಿಟರ್’ ದರ ಮಾರುಕಟ್ಟೆಯಲ್ಲಿ ದಿಢೀರ್ ಏರಿಕೆ ಕಂಡಿದೆ.
ಕೋವಿಡ್ ಎರಡನೇ ಅಲೆಗೆ ತುತ್ತಾಗಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಕರೊನಾ ಸೋಂಕಿತರ ದೇಹದಲ್ಲಿ ಆಕ್ಸಿಜನ್ ಕೊರತೆಯಿಂದಲೇ ಬಹಳಷ್ಟು ಸಾವುಗಳೂ ಸಂಭವಿಸುತ್ತಿವೆ. ಹೀಗಾಗಿ, ವೈದ್ಯರು ಮೇಲಿಂದ ಮೇಲೆ ಆಕ್ಸಿಜನ್ ಲೆವಲ್ ಪರಿಶೀಲಿಸುವಂತೆ ಸಲಹೆ ನೀಡುತ್ತಿದ್ದಾರೆ. ಆದರೆ, ಇತ್ತ ಔಷಧ ಅಂಗಡಿ ಹಾಗೂ ಮಾರುಕಟ್ಟೆಯಲ್ಲಿ ಪಲ್ಸ್ ಆಕ್ಸಿಮಿಟರ್ ದರ 500 ರೂ. ಇದ್ದದ್ದು, 2,500 ರೂ. ಏರಿಕೆ ಕಂಡಿದೆ.
ಖರೀದಿಗೆ ಹಿಂದೇಟು: ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಈ ಹಿಂದಿನಂತೆ ಈಗ ಆಕ್ಸಿಜನ್‌ಗಾಗಿ ಹೆಚ್ಚು ಪರದಾಟವಿಲ್ಲ. ಆದರೆ, ಸಕಾಲಕ್ಕೆ ರೋಗಿಗಳು ಆಸ್ಪತ್ರೆ ಸೇರಬೇಕೆಂದು ವೈದ್ಯರು ಸೂಚಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಜನರಿಗೆ ಕರೊನಾ ಸೋಂಕು ಇದ್ದರೂ ರೋಗ ಲಕ್ಷಣಗಳಿರದ ಕಾರಣ ಪರೀಕ್ಷೆ ಮಾಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಸೋಂಕಿತರ ದೇಹದಲ್ಲಿ ಒಮ್ಮಿಂದೊಮ್ಮೆಲೇ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇವರ ಬಳಿ, ದೇಹದ ಆಕ್ಸಿಜನ್ ಪ್ರಮಾಣ ಪರಿಶೀಲಿಸಲು ಸ್ವಂತ ಪಲ್ಸ್ ಆಕ್ಸಿಮಿಟರ್ ಇಲ್ಲ. ಇದಕ್ಕೆ ಬೆಲೆ ಏರಿಕೆಯೇ ಪ್ರಮುಖ ಕಾರಣವಾಗಿದೆ.
ಬೇಡಿಕೆಯೇ ಬಂಡವಾಳ: ಎಲ್ಲ ಕರೊನಾ ಸೋಂಕಿತರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿಲ್ಲ. ದೇಹದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಾದರೆ ಮಾತ್ರ ಆಸ್ಪತ್ರೆ ದಾಖಲಾಗಿ, ಇಲ್ಲವೇ ಮನೆಯಲ್ಲೇ ಆಕ್ಸಿಜನ್ ಲೆವೆಲ್ ಪರಿಶೀಲಿಸುವಂತೆ ವೈದ್ಯರು ತಿಳಿ ಹೇಳುತ್ತಿದ್ದಾರೆ. ಇದರಿಂದ ಜನರು ಪಲ್ಸ್ ಆಕ್ಸಿಮಿಟರ್ ಖರೀದಿಸಲು ಮುಗಿಬೀಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಔಷಧ ಅಂಗಡಿಕಾರರು, ಮೂರ್ನಾಲ್ಕು ಪಟ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಬೆಳೆಗಾವಿ ಜಿಲ್ಲೆಯ ಕೆಲ ಔಷಧ ಅಂಗಡಿ ಮಾಲೀಕರು 600 ರಿಂದ 800 ರೂ. ಮೌಲ್ಯದ ಪಲ್ಸ್ ಆಕ್ಸಿಮೀಟರ್‌ಗೆ 3,000 ರೂ. ಎಂದು ಸ್ಟಿಕ್ಕರ್ ಅಂಟಿಸಿ ಮಾರಾಟ ಮಾಡುತ್ತಿದ್ದಾರೆ. ಕೋವಿಡ್‌ನಂತಹ ಸಂಕಷ್ಟ ವೇಳೆಯಲ್ಲೂ ಮಾಲೀಕರು ಹಗಲು ದರೋಡೆಗಿಳಿದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಅಂಗಡಿಗಳಲ್ಲಿ ಒಂದೇ ಕಂಪನಿಯ ಪಲ್ಸ್ ಆಕ್ಸಿಮೀಟರ್‌ಅನ್ನು ಬೇರೆ ಬೇರೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಒಂದು ಔಷಧ ಅಂಗಡಿಯಲ್ಲಿ ಆಕ್ಸಿಮೀಟರ್ ಬೆಲೆ 1,600 ರಿಂದ 2,000 ರೂ. ಇದ್ದರೆ, ಮತ್ತೊಂದು ಅಂಗಡಿಯಲ್ಲಿ ಇದೇ ಕಂಪನಿಯ ಅಕ್ಸಿಮೀಟರ್ ದರ 2,500ರಿಂದ 3,000 ರೂ. ಹೇಳುತ್ತಿದ್ದಾರೆ. 5-6 ಔಷಧ ಅಂಗಡಿಗಳನ್ನು ಪರಿಶೀಲಿಸಿದಾಗ ಮೂಲ ದರದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾದೇಶಿಕ ಸಹಾಯಕ ಔಷಧ ನಿಯಂತ್ರಕ ದೀಪಕ ಗಾಯಕವಾಡ, ‘ನಿರ್ದಿಷ್ಟ ದರಕ್ಕೆ ವೈದ್ಯಕೀಯ ಸಾಮಗ್ರಿಗಳನ್ನು ಮಾರಾಟ ಮಾಡಬೇಕು. ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರು ನೀಡಿದರೆ, ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಪರಿಕರಗಳ ದರ ಏರಿಕೆಯಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ಜಿಲ್ಲೆಯಲ್ಲಿ ಪಲ್ಸ್ ಆಕ್ಸಿಮೀಟರ್ ಸೇರಿಇತ್ಯಾದಿ ಮೆಡಿಕಲ್ ಸಾಮಗ್ರಿಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.| ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ, ಬೆಳಗಾವಿ