ದಾವಣಗೆರೆ: ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮಸ್ಥರ ಬೇಡಿಕೆಯಂತೆ ಶೀಘ್ರವೇ 24 ಗಂಟೆ ಕಾರ್ಯ ನಿರ್ವಹಿಸುವ ಆಸ್ಪತ್ರೆ ಹಾಗೂ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಜಗಳೂರು ತಾಲ್ಲೂಕಿನ ಪಲ್ಲಾಗಟ್ಟಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಕ್ಕೆ ಅವಶ್ಯವಿದ್ದ ರಾಜ್ಯ ಸಾರಿಗೆ ಬಸ್ ಸಂಪರ್ಕ ಕಲ್ಪಿಸಲಾಗಿದೆ. ಸಂಚಾರದ ವೇಳೆ ಬದಲಾವಣೆ ಬಗ್ಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದು ಪರಿಶೀಲಿಸಲಾಗುವುದು ಎಂದರು.
ದೇಶದಲ್ಲಿ ಜನಸಂಖ್ಯೆ ಹೆಚ್ಚಬಹುದು, ಆದರೆ ಇರುವ ಭೂ ವಿಸ್ತೀರ್ಣ ಹೆಚ್ಚುವುದಿಲ್ಲ. ಆದರೆ ಜನರಿಗೆ ಬೇಕಾದ ಆಹಾರ ಉತ್ಪಾದನೆ ಮಾಡಲೇಬೇಕು. ಸ್ವಾತಂತ್ರ್ಯ ನಂತರದಲ್ಲಿ ದೇಶ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇಂದು ಸ್ವಾವಲಂಭಿಗಳಾಗಿದ್ದೇವೆ, ಆದರೂ ಸಹ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿ ಜತೆಗೆ ಮೂಲ ಸೌಕರ್ಯಗಳ ಅಭಿವೃದ್ಧ್ದಿಯೂ ಆಗಬೇಕಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೋಷಣ್ ಅಭಿಯಾನ ಯೋಜನೆಯಡಿ 50 ಗರ್ಭಿಣಿಯರಿಗೆ ಸೀರೆ ನೀಡುವ ಮೂಲಕ ಸೀಮಂತ ನೆರವೇರಿಸಲಾಯಿತು. ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿ ನೆಡಲಾಯಿತು. ಸುಮಾರು 77 ಕುಂದುಕೊರತೆಯ ಅರ್ಜಿಗಳು ಸ್ವೀಕೃತವಾಗಿವೆ.
ಜಿಪಂ ಸಿಇಒ ಡಾ. ಎ.ಚನ್ನಪ್ಪ, ಗ್ರಾ.ಪಂ ಅಧ್ಯಕ್ಷೆ ಗಾಯಿತ್ರಿ ಹನುಮಂತಪ್ಪ, ಉಪಾಧ್ಯಕ್ಷೆ ಮಂಜಮ್ಮ ಪ್ರಕಾಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಡಿಎಚ್‌ಒ ಡಾ.ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ತಹಸೀಲ್ದಾರ್ ಸಂತೋಷ್ ಕುಮಾರ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಇತರರಿದ್ದರು.