ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷ ಡಾ.ಚನ್ನಬಸವಾನಂದ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಕೋಶಾಧ್ಯಕ್ಷ ಸದ್ಗುರು ಪ್ರಭು ಲಿಂಗ ಸ್ವಾಮೀಜಿ, ಮುಖಂಡರಾದ ಅಶೋಕ ಬೆಂಡಿಗೇರಿ, ಕೆ.ಬಸವರಾಜಪ್ಪ, ಸಂಗಮೇಶ ಲಿಂಗಾಯತ, ಚಂದ್ರಕಾಂತ ಲುಕ್ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು. 
ಜಿಲ್ಲೆ

ಪರ್ಯಾಯವಾಗಿ ಸ್ವಾಭಿಮಾನಿ ಶರಣ ಮೇಳ

ಬಾಗಲಕೋಟೆ: ಬಸವಧರ್ಮ ಪೀಠದ ಮಾತೇ ಗಂಗಾದೇವಿ ನಮ್ಮನ್ನು ಟ್ರಸ್ಟನಿಂದ ಹೊರಗೆ ಹಾಕಿದರಿಂದ ಕೂಡಲಸಂಗಮ ಸಮೀಪದ ಹೂವನೂರು ಗ್ರಾಮದ ಜಮೀನೊಂದರಲ್ಲಿ ಜ.೧೩ ಮತ್ತು ೧೪ ರಂದು ಬಸವ ಕ್ರಾಂತಿಯ ನಿಮಿತ್ತ ೩೬ ನೇ ಸ್ವಾಭಿಮಾನಿ ಶರಣ ಮೇಳ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ಕಳೆದ ೩೫ ವರ್ಷಗಳಿಂದ ಲಿಂ.ಮಾತೇ ಗಂಗಾದೇವಿ ಶರಣ ಮೇಳ ಆಯೋಜನೆ ಮಾಡುತ್ತಾ ಬಂದಿದ್ದೇವಿ. ಡಾ.ಬಿ.ಆರ್.ಅಂಬೇಡ್ಕರ ಅವರ ಮೊಮ್ಮಗ ಡಾ.ಪ್ರಕಾಶ ಅಂಬೇಡ್ಕರ ಉದ್ಘಾಟಿಸಲಿದ್ದಾರೆ. ಪೀಠಾರೋಹಣ ಯಾವುದೇ ಪೀಠಾಧಿಪತಿಗಳು ಮಾಡುವದಿಲ್ಲ. ಬಸವಧರ್ಮದ ಧಾರ್ಮಿಕ ಗ್ರಂಥ ವಚನ ಸಾಹಿತ್ಯ ಕೃತಿಗಳನ್ನು ಪೀಠದ ಮೇಲೆ ಇಡಲಾಗುವುದು. ವಚನ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯಲಿವೆ. ಮಾತೇ ಗಂಗಾದೇವಿ ನಮ್ಮನ್ನು ಹೊರಗೆ ಹಾಕಿದ್ದರಿಂದ ಪರ್ಯಾಯವಾಗಿ ಮೇಳ ಹಮ್ಮಿಕೊಂಡಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ.೧೩ ಬೆಳಗ್ಗೆ ಉದ್ಘಾಟನೆಗೂ ಮುನ್ನ ಕೂಡಲಸಂಗಮದಲ್ಲಿನ ಐಕ್ಯ ಮಂಟಪದಿಂದ ಜ್ಯೋತಿ ಮೆರವಣಿಗೆ ನಡೆಯಲಿದೆ. ಬಸವ ಜ್ಯೋತಿಯಿಂದ ಮೇಳ ಉದ್ಘಾಟಿಸಲಾಗುವುದು. ಮಧ್ಯಾಹ್ನ ೩ ಗಂಟೆಗೆ ಲಿಂಗಾಯ ಧರ್ಮದ ಮಾನ್ಯತೆಗಾಗಿ ಜ.೨೯ ರಂದು ಮುಂಬಯಿನಲ್ಲಿ ನಡೆಯಲಿರುವ ಲಿಂಗಾಯತ ಮಹಾರ‍್ಯಾಲಿಯಲ್ಲಿ ಪೂರ್ವ ಸಿದ್ಧತೆ ಚಿಂತನ ಗೋಷ್ಠಿ ನಡೆಯಲಿದೆ. ಸಂಜೆ ೭ ಗಂಟೆಗೆ ಲಿಂಗಾಯ ಧರ್ಮದ ಪೀಠಾರೋಹಣ ಜರುಗಲಿದೆ. ಜ.೧೪ ರಂದು ಬೆಳಗ್ಗೆ ೮ ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ, ೧೧ ಗಂಟೆಗೆ ಸಮುದಾಯದ ಪ್ರಾರ್ಥನೆ, ವಚನ ಪಾರಾಯಣ, ಕಸರೆಳ್ಳು ವಿನಿಯಮ, ವಚನ ಗಾಯನ, ನೃತ್ಯ ನಡೆಯಲಿದೆ ಎಂದು ಹೇಳಿದರು.


ವಿಶ್ವ ಗುರು ಬಸವಣ್ಣ, ಮಾತೇ ಮಹಾದೇವಿ ಪೋಟೋ ಇಟ್ಟು ಸಾನ್ನಿಧ್ಯ ಸ್ಥಾನ ನೀಡಲಾಗಿದೆ. ಮಾತೇ ಸತ್ಯಾದೇವಿ, ಪ್ರಭುಲಿಂಗ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ವೇದಿಕೆಗೆ ಲಿಂ. ಲಿಂಗಾನಂದ ಸ್ವಾಮೀಜಿ, ದಾಸೋಹ ನಿಲಯಕ್ಕೆ ನೀಲಗಂಗಮ್ಮ ತಾಯಿ, ಸಭಾ ಮಂಟಪಕ್ಕೆ ಮಾತೇ ಮಹಾದೇವಿ, ಮಹಾದ್ವಾರಕ್ಕೆ ಚಿನ್ಮಯ ಜ್ಞಾನಿ ಚನ್ನಬಸವೇಶ್ವರ ಹೆಸರು ನಾಮಕಾರಣ ಮಾಡಲಾಗುವುದು. ಲಿಂಗಾಯತ ಧರ್ಮ ಮಾನ್ಯತೆಗಾಗಿ ಹೋರಾಡಿ ಗುರಿ ತಲುಪುವುದು, ಅಲ್ಪ ಸಂಖ್ಯಾತ ಮಾನ್ಯತೆ ದೊರಕಿಸಲು ಸರ್ಕಾರದ ಮೇಲೆ ಒತ್ತಡ ಹಾಕುವುದು, ಜನ ಜಾಗೃತಿ ಮೂಡಿಸುವುದು ಮೇಳದ ಉದ್ದೇಶ ಎಂದು ತಿಳಿಸಿದರು.


ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಕೋಶಾಧ್ಯಕ್ಷ ಸದ್ಗುರು ಪ್ರಭು ಲಿಂಗ ಸ್ವಾಮೀಜಿ, ಮುಖಂಡರಾದ ಅಶೋಕ ಬೆಂಡಿಗೇರಿ, ಕೆ.ಬಸವರಾಜಪ್ಪ, ಸಂಗಮೇಶ ಲಿಂಗಾಯತ, ಚಂದ್ರಕಾಂತ ಲುಕ್ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.