ಬಸವಕಲ್ಯಾಣ: ನಗರದಲ್ಲಿರುವ ಪವಿತ್ರ ಪರುಷ ಕಟ್ಟೆಯ ಇವತ್ತಿನ ಸ್ಥಿತಿ ಕಣ್ಣೀರು ತರುತ್ತಿರಬಹುದು. ಆದರೆ ಮುಂದಿನ ದಿನಗಳಲ್ಲಿ ಇದು ಅಭಿವೃದ್ಧಿ ಹೊಂದಿ ಶ್ರೇಷ್ಠ ಶ್ರದ್ಧಾ ಕೇಂದ್ರವಾಗಲಿದೆ ಎಂದು ಬಸವಕಲ್ಯಾಣ ಕ್ಷೇತ್ರ ಸಮಿತಿ ಸಂಯೋಜಕ, ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಆಶಯ ವ್ಯಕ್ತಪಡಿಸಿದರು.
ನಗರದಲ್ಲಿ ಮಹಾತ್ಮ ಬಸವೇಶ್ವರ ಜಾತ್ರಾ ಅಮೃತ ಮಹೋತ್ಸವದ ನಿಮಿತ್ತ ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಮತ್ತು ವಿಶ್ವಸ್ಥ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಆಧ್ಯಾತ್ಮಕ ಪ್ರವಚನದಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ಕಾಯಕ ಭೂಮಿ ಕಲ್ಯಾಣ ಜಗತ್ತಿಗೆ ಬೆಳಕು ನೀಡುವ ಕೇಂದ್ರವಾಗಬೇಕು ಎಂದರು.
ನೂತನ ಅನುಭವ ಮಂಟಪ ನಿರ್ಮಾಣವಾಗುತ್ತದ್ದು, ಕಲೆ, ಸಂಸ್ಕೃತಿ, ವ್ಯಾಪಾರ, ವ್ಯವಹಾರದಲ್ಲಿ ಬದಲಾಗದ ಹೊರತು ಕಲ್ಯಾಣ ವಿಶ್ವ ಆಧ್ಯಾತ್ಮಿಕ ಕೇಂದ್ರವಾಗದು. ಹೀಗಾಗಿ ಕಲ್ಯಾಣವನ್ನು ವಿಶ್ವಶ್ರೇಷ್ಠ ತಾಣವನ್ನಾಗಿಸುವ ಜವಾಬ್ದಾರಿ ನಮ್ಮ, ನಿಮ್ಮೇಲ್ಲರ ಮೇಲು ಇದೆ ಎಂದರು.
ನೇತೃತ್ವ ವಹಿಸಿದ್ದ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಶರಣರು ಇದ್ದ ಸ್ಥಳವೇ ಅವಿಮುಕ್ತ ಸ್ಥಳ ಎಂದು ವಚನಗಳಲ್ಲಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಲಕ್ಷ-ಲಕ್ಷ ಜನ ಇಲ್ಲಿಗೆ ಬರುತ್ತಾರೆ. ಕಲ್ಯಾಣ ವಿಶ್ವ ಪಾರಂಪರಿಕ ತಾಣವಾಗಿ ಬೆಳೆಯಲಿದೆ. ನಾವೆಲ್ಲರೂ ಜಾಗೃತರಾಗಿ ಬಸವ ತತ್ವವನ್ನು ಆಳವಡಿಸಿಕೊಂಡರೆ ಜಗತ್ತೇ ಈ ಕಡೆ ನೋಡಲಿದೆ ಎಂದರು.
ಬಾಲಗಾಂವ ಗುರುದೇವಾಶ್ರಮ ಶ್ರೀ ಅಮೃತಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ೨೦ ದಿನಗಳ ಪ್ರವಚನ ಕುರಿತು ಬಿಡಿಪಿಸಿ ನಿರ್ದೇಶಕ ಕಾಶೆಪ್ಪ ಸಕ್ಕರಭಾವಿ ಮತ್ತು ಸುಲೋಚನಾ ಮಾಮಾ ಅನಿಸಿಕೆ ವ್ಯಕ್ತಪಡಿಸಿದರು. ಡಾ.ರುದ್ರಮಣಿ ಮಠಪತಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಭೀಮಾಶಂಕರ ಬಿರಾದಾರ ವಂದಿಸಿದರು. ಜ್ಯೋತಿ ತುಗಾವೆ ನಿರೂಪಣೆ ಮಾಡಿದರು.