ಬಸವಕಲ್ಯಾಣ: ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗದೆ ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜತೆಗೆ ಶ್ರಮ ವಹಿಸಿ ಅಭ್ಯಾಸ ಮಾಡಿ ಪರೀಕ್ಷೆ ಬರೆಯಬೇಕು ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಹಾರಕೂಡ ಶ್ರೀಮಠದಲ್ಲಿ ಜಿಪಂ ಬೀದರ್, ಶಾಲಾ ಶಿಕ್ಷಣ ಇಲಾಖೆ ಬೀದರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ವಿಜ್ಞಾನ ಮತ್ತು ದ್ವಿತೀಯ ಭಾಷೆ ಇಂಗ್ಲಿಷ ವಿಷಯಗಳ ಕುರಿತು ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ವಿಜ್ಞಾನ ಮತ್ತು ಇಂಗ್ಲಿಷ್ ಕಠಿಣವೆಂದು ಭಾವಿಸದೆ ಸವಾಲಾಗಿ ಸ್ವೀಕರಿಸಿ ಶ್ರಮವಹಿಸಿ ಓದಬೇಕು ಎಂದು ಹೇಳಿದರು.
ಪ್ರತಿ ಮಗುವಿನಲ್ಲಿಯೂ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರ್ತಿಸಿ ಪ್ರೋತ್ಸಾಹಿಸುವ ಜತೆಗೆ ಅದರ ರಚನಾತ್ಮಕ ಬಳಕೆಗೆ ಪೂರಕವಾದ ವಾತಾವರಣ ಕಲ್ಪಿಸಿಕೊಡುವದು ಅವಶ್ಯಕವಾಗಿದೆ. ೧೦ನೇ ವರ್ಗದ ಶಿಕ್ಷಣ ವಿದ್ಯಾರ್ಥಿ ವಿಕಾಸದಲ್ಲಿ ಮಹತ್ವ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಸರಿ ಮಾರ್ಗದಲ್ಲಿ ನಿರಂತರ ಪ್ರಯತ್ನ, ಕೌಶಲಪೂರ್ಣ ಜಾಣ್ಮೆಯಿಂದ ಸಾಧನೆಯ ಕಿರೀಟ ಧರಿಸಬಹುದು ಎಂದರು.
ಬಿಇಒ ಸಿದ್ದವೀರಯ್ಯ ರುದ್ರನ್ನೂರ, ಇಸಿಒ ರಾಜಕುಮಾರ ಸಾಲಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಶಾಂತಿ ದೇಸಾಯಿ ಕಾರ್ಯಾಗಾರ ನಡೆಸಿಕೊಟ್ಟರು.
ಶಿಕ್ಷಕ ಮಲ್ಲಿನಾಥ ಹಿರೇಮಠ, ಸಿಆರ್‌ಪಿಗಳಾದ ಗೋವಿಂದ ಚಿಟ್ಟಪಲ್ಲೇ, ವೆಂಕಟರಾವ ಕಿಟ್ಟಾ, ಅಣ್ಣೆಪ್ಪ ಭೋಸಗಾ, ಲಕ್ಷ್ಮಣ ಹಾರಕೂಡ, ಪರಮೇಶ್ವರ ಹಾರಕೂಡ, ಪ್ರಕಾಶ ಖೇರ್ಡ್, ದಿಲೀಪ ಮುಡಬಿ, ಜಾಕೀರ್ ಹುಸೇನ್ ಕಲಖೋರಾ, ಹಾರಕೂಡ ಎಸ್ಡಿಎಂಸಿ ಅಧ್ಯಕ್ಷ ಮಹದೇವ ಪೂಜಾರಿ, ಐ.ಜಿ.ಮಠಪತಿ, ಸುನಿತಾ ನಾಲೂರೆ, ಪಂಡಿತ ಪೂಜಾರಿ, ಗುಂಡಯ್ಯ ಆಲೂರ ಇತರರಿದ್ದರು. ಮುಖ್ಯಶಿಕ್ಷಕ ರಮೇಶ ರಾಜೋಳೆ ನಿರೂಪಣೆ ಮಾಡಿದರು. ಉಮಾಕಾಂತ ಬಂಗೆ ವಂದಿಸಿದರು.