ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಅನಿವಾರ್ಯ. ಆದರೆ ಅಂತಿಮವಲ್ಲ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅದನ್ನು ಸಾಧಿಸುವ ಮಾರ್ಗ ಯಾವುದು? ಪರೀಕ್ಷೆ ಸಿದ್ಧತೆ ಯಾವ ರೀತಿ ಇರಬೇಕು, ದುಗುಡ, ಆತಂಕ ಭಯ ನಿವಾರಿಸುವುದು ಹೇಗೆ ಎಂದು ಅರಿತರೆ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್‌ಎಸ್ ಕಾಲೇಜಿನಲ್ಲಿ ಬೆಂಗಳೂರಿನ ಬ್ರೇನ್‌ತಾನ್ ಸಂಸ್ಥೆಯೊಂದಿಗೆ ಪದವಿ ಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ನಿವಾರಣೆ ಹಾಗೂ ಜ್ಞಾಪಕ ಶಕ್ತಿ ವೃದ್ಧಿ ಬಗ್ಗೆ ಏರ್ಪಡಿಸಿರುವ 10 ದಿನಗಳ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಬ್ರೇನ್‌ತಾನ್‌ನ ಪ್ರದೀಪ ಆಚಾರ್ಯ ಮಾತನಾಡಿ, ಪಿಯು ಪರೀಕ್ಷೆಗಳು ನಮ್ಮ ಭವಿಷ್ಯ ನಿರ್ಧರಿಸಬಲ್ಲ, ಒಂದೇ ಒಂದು ಬಾರಿ ಬಂದು ಹೋಗುವ ಅತ್ಯಂತ ಪ್ರಮುಖ ಪರೀಕ್ಷೆ ಎಂಬುದನ್ನು ಮರೆಯಬಾರದು. ಭಯವಿದ್ದಲ್ಲಿ ಪರೀಕ್ಷಾ ಸಿದ್ಧತೆಗಳು ಚೆನ್ನಾಗಿ ನಡೆಯುತ್ತವೆ. ಆದರೆ ಭಯ ಅತಿಯಾದರೂ ಒಳ್ಳೆಯದಲ್ಲ. ಸ್ವಲ್ಪ ಮಟ್ಟಿನ ಒತ್ತಡ ಅನೂಕೂಲಕರ. ಪರೀಕ್ಷಾ ಸಿದ್ಧತೆಯಲ್ಲಿ ಮನಸ್ಸಿನ ಏಕಾಗ್ರತೆ ಮುಖ್ಯ ವಿಷಯ. ಪರೀಕ್ಷೆ ಸಿದ್ಧತೆಗಳು ಸಾಕಷ್ಟು ಮುಂಚಿತವಾಗಿ ನಡೆದಿರಬೇಕು. ಸಿದ್ಧತೆ ಸಮಯದಲ್ಲಿ ಆರೋಗ್ಯದ ಬಗ್ಗೆ ಗಮನವಿರಲಿ. ಪರೀಕ್ಷಾ ತಯಾರಿಯಲ್ಲಿ ಪಾಠಗಳನ್ನು ಬಾಯಿಪಾಠ ಮಾಡುವುದು ಅಪಾಯಕಾರಿ ಎಂದರು.
ಜೆಎಸ್‌ಎಸ್ ಹುಕ್ಕೇರಿಕರ ಪಿಯು ಕಾಲೇಜಿನ ಪ್ರಾಚಾರ್ಯೆ ಭಾರತಿ ಶಾನಭಾಗ, ಐಟಿಐನ ಪ್ರಾಚಾರ್ಯರಾದ ಮಹಾವೀರ ಉಪಾಧ್ಯೆ, ಇತರರು ಇದ್ದರು. ವಿನಯಾ ಜೋಶಿ ವಂದಿಸಿದರು.