ರಾಯಬಾಗ:ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಕರೊನಾ ವೇಗವಾಗಿ ಹಬ್ಬುತ್ತಿದ್ದು, ಕ್ಷೇತ್ರದ ಜನರು ಮುನ್ನೆಚ್ಚರಿಕೆ ವಹಿಸಬೇಕು. ಅಲ್ಲದೆ, ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶಾಸಕರ ಅನುದಾನದಲ್ಲಿ ಖರೀದಿಸಿದ 9 ಆಕ್ಸಿಜನ್ ಸಾಂದ್ರಕಗಳನ್ನು ಶನಿವಾರ ವಿತರಿಸಿ ಮಾತನಾಡಿದ ಅವರು, ಜನರು ಮನೆಯಲ್ಲಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ಅನಾರೋಗ್ಯಕ್ಕೊಳಗಾದ ಕೂಡಲೇ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಅನಗ್ಯತವಾಗಿ ಮನೆಯಿಂದ ಹೊರಗೆ ಬರಬಾರದು.ಕೋವಿಡ್ ವಿರುದ್ಧ ಹೋರಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಚಿಕ್ಕೋಡಿ ಎಡಿಎಚ್‌ಒ ಎಸ್.ಎಸ್.ಗಡೇದ ಮಾತನಾಡಿ, ಜನರು ಪ್ರಾಥಮಿಕ ಹಂತದಲ್ಲಿ ಸೂಕ್ತ ಔಷಧಗಳಿಂದ ಚಿಕಿತ್ಸೆ ಪಡೆದುಕೊಂಡರೆ ಬೇಗ ಗುಣಮುಖರಾಗಲು ಸಾಧ್ಯ ಎಂದು ತಿಳಿಸಿದರು. ತಹಸೀಲ್ದಾರ್ ಡಾ.ಮೋಹನ ಭಸ್ಮೆ, ಮುಖ್ಯಾಧಿಕಾರಿ ಡಾ.ಆರ್.ಎಚ್.ರಂಗಣ್ಣವರ, ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್.ಬಾನೆ, ಸಿಪಿಐ ಎಚ್.ಡಿ.ಮುಲ್ಲಾ, ಅರುಣ ಐಹೊಳೆ, ಮಹೇಶ ಕರಮಡಿ, ಅಣ್ಣಾಸಾಹೇಬ ಖೇಮಲಾಪುರೆ, ಸದಾನಂದ ಹಳಿಂಗಳಿ ಇತರರಿದ್ದರು.