ಭಾಲ್ಕಿ: ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಭಾನುವಾರ ಗುರುಕುಲ ಗೋಲ್ಡನ್ ಸ್ಕಾಲರ್‌ಶಿಪ್ ಎರಡನೇ ಹಂತದ ಪ್ರವೇಶ ಪರೀಕ್ಷೆ ನಡೆಯಿತು.
ಸ್ಕಾಲರ್‌ಶಿಪ್ ಪ್ರವೇಶ ಪರೀಕ್ಷೆ ನೋಂದಣಿ ೧೦ ಸಾವಿರ ದಾಟಿದ್ದು, ಅದರಲ್ಲಿ ಎರಡನೇ ಹಂತದ ಪ್ರವೇಶ ಪರೀಕ್ಷೆಗೆ ೨೯೦೦ ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದರು. ಆ ಪೈಕಿ ೨೧೮೮ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರು. ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ೨೦ಕ್ಕೂ ಅಧಿಕ ಜಿಲ್ಲೆ ಸೇರಿ ನೆರೆಯ ಮಹಾರಾಷ್ಟ್ರದ ಲಾತೂರು, ನಾಂದೇಡ, ಪರಳಿ, ತೆಲಂಗಾಣ ರಾಜ್ಯದ ನಾರಾಯಣ ಖೇಡ ಸೇರಿ ಮುಂತಾದ ಕಡೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ಪರೀಕ್ಷೆ ಬರೆದರು.
ಪ್ರವೇಶ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ೨೫ ವಿದ್ಯಾರ್ಥಿಗಳಿಗೆ ಉಚಿತ ಎರಡು ವರ್ಷ ಪಿಯುಸಿ ಶಿಕ್ಷಣ, ವಸತಿ ಮತ್ತು ಸ್ಪರ್ಧಾತ್ಮಕ ತರಬೇತಿ ನೀಡಲಾಗುತ್ತದೆ. ನಂತರದಲ್ಲಿ ಕ್ರಮವಾಗಿ ಅಂಕ ಪಡೆಯುವ ೭೫ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ತರಬೇತಿ ನೀಡಲು ಸಂಸ್ಥೆ ನಿರ್ಧರಿಸಿದೆ.
ಶುಭ ಹಾರೈಕೆ: ಎರಡನೇ ಹಂತದಲ್ಲಿ ಪ್ರವೇಶ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಶ್ರೀ ಪಟ್ಟದ್ದೇವರು ಶುಭ ಹಾರೈಸಿದರು. ಎಲ್ಲ ಪರೀಕ್ಷೆ ಕೊಠಡಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯದಿಂದ ಪರೀಕ್ಷೆ ಬರೆದು ಗೋಲ್ಡನ್ ಸ್ಕಾಲರ್ ಶಿಪ್ ಪ್ರವೇಶ ಪರೀಕ್ಷೆಯ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಆಡಳಿತಾಧಿಕಾರಿ ಮೋಹನ ರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪಪ್ರಾಚಾರ್ಯ ಸಿದ್ರಾಮ ಗೊಗ್ಗಾ ಹಾಜರಿದ್ದರು.