ಜಿಲ್ಲೆ

ಪರೀಕ್ಷೆ ಬರೆದ 55 ವರ್ಷದ ಪೇದೆ

ಕೋಲಾರ: ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್ ಪೇದೆ ಮಂಜುನಾಥ್ (55) ಪುನರಾವರ್ತಿತ ಅಭ್ಯರ್ಥಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು ವಿಶೇಷವಾಗಿತ್ತು. ನಗರದ ಕಠಾರಿಪಾಳ್ಯದ ನಿವಾಸಿ ಮಂಜುನಾಥ್ ಬೆಂಗಳೂರಿನ ಕೋರಮಂಗಲದ ಸಶಸ್ತ್ರ ಪೊಲೀಸ್ ಮೀಸಲು ಪಡೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದಾರೆ. 1993ರಲ್ಲಿ ನಾಲ್ಕನೇ ತರಗತಿ ಪಾಸ್ ಆಗಿದ್ದರೆ ಕೆಲಸ ಸಿಗುತ್ತಿತ್ತು. ಮಂಜುನಾಥ್ 7ನೇ ತರಗತಿ ಪಾಸ್ ಆಗಿದ್ದರು.

1996 ನಂತರ ಪೇದೆ ಕೆಲಸಕ್ಕೆ ಸೇರಲು ಹತ್ತನೇ ತರಗತಿ ಉತ್ತೀರ್ಣ ಕಡ್ಡಾಯ ಮಾಡಿದ್ದಾರೆ. ಎಸ್ಸೆಸ್ಸೆಲ್ಸಿ ಪಾಸ್ ಆದರೆ ಕಾನ್‌ಸ್ಟೆಬಲ್ ಹುದ್ದೆಗೆ ಬಡ್ತಿ ಸಿಗುತ್ತದೆ ಎಂಬ ಕಾರಣಕ್ಕೆ ಕಳೆದ ವರ್ಷವೂ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದರಾದರೂ ತೇರ್ಗಡೆ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆ ಪರೀಕ್ಷೆ ತೆಗೆದುಕೊಳ್ಳುವ ಮುನ್ನ ಎಸ್ಸೆಸ್ಸೆಲ್ಸಿ ಪಾಸ್ ಆಗಬೇಕೆಂಬ ಹಠಕ್ಕೆ ಬಿದ್ದು ಈ ವರ್ಷವೂ ಪರೀಕ್ಷೆ ಬರೆದಿದ್ದಾರೆ.

ಮಂಜುನಾಥ್ ಪರೀಕ್ಷೆ ಬರೆಯಲು ಬಂದಾಗ ಕೆಲವರು ಶಿಕ್ಷಕರೋ, ಮುಖ್ಯಶಿಕ್ಷಕರೋ ಇರಬೇಕು ಎಂದುಕೊಂಡರು. ಆದರೆ ವಿದ್ಯಾರ್ಥಿಯಂತೆ ಪರೀಕ್ಷೆ ಬರೆಯಲು ಬೆಂಚಿನಲ್ಲಿ ಕುಳಿತಾಗ ಆಶ್ಚರ್ಯಚಕಿತರಾದರು.

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನನಗೆ ಇನ್ನು 5 ವರ್ಷ ಸೇವಾವಧಿ ಇದೆ. ಎಸ್ಸೆಸ್ಸೆಲ್ಸಿ ಪಾಸ್ ಮಾಡಿದರೆ ಬಡ್ತಿ ಸಿಗುತ್ತದೆ. ಈಗಾಗಲೆ ವಿಜ್ಞಾನ, ಹಿಂದಿ, ಸಮಾಜ ವಿಜ್ಞಾನ ಪರೀಕ್ಷೆ ಪಾಸ್ ಮಾಡಿದ್ದೇನೆ, ಉಳಿದ ಮೂರು ವಿಷಯಗಳಿಗೆ ಪರೀಕ್ಷೆ ಬರೆಯುತ್ತಿದ್ದೇನೆ. ಈ ಬಾರಿ ಪಾಸ್ ಆಗಿಯೇ ಆಗುತ್ತೇನೆ ಎಂದು ಮಂಜುನಾಥ್ ವಿಶ್ವಾಸದ ನುಡಿಗಳನ್ನಾಡಿದ್ದಾರೆ. ಬಂಗಾರಪೇಟೆ ತಾಲೂಕಿನ ಚಿನ್ನಕೋಟೆಯ 51 ವರ್ಷದ ಅಶೋಕ್ ಎಂಬುವವರು ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದು, ಇವರು ಕೂಡಾ ಹತ್ತನೇ ತರಗತಿ ಪರೀಕ್ಷೆ ಬರೆದಿದ್ದಾರೆ.