ಮೈಸೂರು: ಸ್ನಾತಕ ಪದವಿ ಪರೀಕ್ಷೆಯನ್ನು ಮುಂದೂಡಲು ಮತ್ತು ಪರೀಕ್ಷೆಯ ಶುಲ್ಕದ ಏರಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದ ಎದುರು ನೂರಾರು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಮೈಸೂರು ವಿಶ್ವವಿದ್ಯಾಲಯದ ಸ್ನಾತಕ ಪದವಿಯ ವಿದ್ಯಾರ್ಥಿಗಳ ಪರೀಕ್ಷಾ ಅಧಿಸೂಚನೆ ಪ್ರಕಾರ ನವೆಂಬರ್ 15ರಿಂದ ಪರೀಕ್ಷೆ ಪ್ರಾರಂಭವಾಗಲಿದೆ ಎಂದು ತಿಳಿಸಲಾಗಿದೆ. ಆದರೆ, ಕಾಲೇಜುಗಳು ಆಗಸ್ಟ್‌ನಲ್ಲೇ ಪುನರಾರಂಭವಾದರೂ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ಮತ್ತು ಅತಿಥಿ ಉಪನ್ಯಾಸಕರ ನೇಮಕವಾಗಿಲ್ಲದ ಕಾರಣ ತರಗತಿಗಳು ನಡೆದಿಲ್ಲ. ಒಂದೂವರೆ ತಿಂಗಳಿನ ನಂತರ ತರಗತಿಗಳು ಶುರುವಾಗಿವೆ.
ಇದರಿಂದ ಪಠ್ಯಕ್ರಮಗಳ ಬೋಧನೆ ಸಂಪೂರ್ಣವಾಗಿ ಮುಗಿದಿಲ್ಲ. ಪಠ್ಯಕ್ರಮ ಪೂರ್ಣಗೊಳ್ಳದೆ ಪರೀಕ್ಷೆ ನಡೆಸುವುದು ಅವೈಜ್ಞಾನಿಕ. ಅಲ್ಲದೆ ಇದು ವಿದ್ಯಾರ್ಥಿಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಆದ್ದರಿಂದ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಚಂದ್ರಕಲಾ ಮಾತನಾಡಿ, ಪದವಿ ಪರೀಕ್ಷೆಯ ಶುಲ್ಕವು ಪ್ರತಿ ವರ್ಷವೂ ಮನಸೋಇಚ್ಛೆ ಏರಿಕೆಯಾಗುತ್ತಿದೆ. ಸರ್ಕಾರಿ ಪದವಿ ಕಾಲೇಜುಗಳನ್ನು ಅರಸಿ ಬರುವವರು ಬಡ ವಿದ್ಯಾರ್ಥಿಗಳು. ಆದರೆ, ಆ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕವನ್ನೇ 2 ಸಾವಿರ ರೂ. ಸಂಗ್ರಹ ಮಾಡುತ್ತಿದ್ದಾರೆ.
ತೃತೀಯ ಸೆಮಿಸ್ಟರ್ ಓದುತ್ತಿರುವ ಮತ್ತು ಪದವಿಯನ್ನೇ ಮುಗಿಸಿರುವ ವಿದ್ಯಾರ್ಥಿಗಳಿಗೆ ಯಾವುದೇ ಸೆಮಿಸ್ಟರ್‌ನ ಅಂಕಪಟ್ಟಿಯೇ ಸಿಕ್ಕಿಲ್ಲ. ಆದರೂ ಅಂಕಪಟ್ಟಿಯ ಶುಲ್ಕವನ್ನು ಪ್ರತಿ ವರ್ಷವೂ ಕಟ್ಟಿಸಿಕೊಳ್ಳುತ್ತಿದ್ದಾರೆ. ಜತೆಗೆ ಪ್ರತಿ ವರ್ಷವೂ ಏರಿಕೆ ಆಗುತ್ತಿದೆ. ಆದ್ದರಿಂದ ಹೆಚ್ಚುವರಿ ಶುಲ್ಕವನ್ನು ಈ ಕೂಡಲೇ ಕೈ ಬಿಡಬೇಕು ಮತ್ತು ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಅಂಕಪಟ್ಟಿ ವಿತರಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳು: ಪಠ್ಯಕ್ರಮ ಪೂರ್ಣಗೊಳ್ಳದೆ ಪರೀಕ್ಷೆಗಳನ್ನು ನಡೆಸಬಾರದು. ಪದವಿ ಪರೀಕ್ಷೆಗಳನ್ನು ಮುಂದೂಡಬೇಕು. ಪರೀಕ್ಷಾ ಹಾಗೂ ಅಂಕಪಟ್ಟಿಯ ಶುಲ್ಕ ಹೆಚ್ಚಳವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ನಿತಿನ್ ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಹೇಮಾ, ಅಂಜಲಿ, ಅಭಿಷೇಕ್, ಮಹಾರಾಜ, ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳಾದ ಗುರುರಾಜ್, ಸತೀಶ್, ಸಂತೋಷ್, ಜ್ಞಾನೇಶ್, ಹರ್ಫತ್, ಭೂಮಿಕಾ, ಅರ್ಚನಾ ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.