ಜಿಲ್ಲೆ

ಪರೀಕ್ಷಾ ಶುಲ್ಕ ಏರಿಕೆ ಕೈ ಬಿಡಲು ಆಗ್ರಹಿಸಿ ಪ್ರತಿಭಟನೆ

 ಎಲ್ಲ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶಾತಿ ಶುಲ್ಕದ ಏರಿಕೆಯನ್ನು ಕೈ ಬಿಡಬೇಕು. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಜೀರೋ ಪೇಮೆಂಟ್ ವ್ಯವಸ್ಥೆಯನ್ನು ಮತ್ತೆ ಜಾರಿ ಮಾಡಬೇಕು 

ಎಲ್ಲ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶಾತಿ ಶುಲ್ಕದ ಏರಿಕೆಯನ್ನು ಕೈ ಬಿಡಬೇಕು. ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಜೀರೋ ಪೇಮೆಂಟ್ ವ್ಯವಸ್ಥೆಯನ್ನು ಮತ್ತೆ ಜಾರಿ ಮಾಡಬೇಕು  ಎಂದು ಒತ್ತಾಯಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರು ಸೋಮವಾರ ಪ್ರತಿಭಟನೆ ನಡೆಸಿದರು.

ಮಹಾರಾಣಿ ಕಾಲೇಜಿನಲ್ಲಿ ಜೀರೋ ಪೇಮೆಂಟ್ ತೆಗೆದು ಹಾಕಿರುವುದನ್ನು ಮತ್ತು ಶುಲ್ಕ ಏರಿಕೆ ಸಮಸ್ಯೆಯನ್ನು ಮೈಸೂರು ವಿಶ್ವವಿದ್ಯಾಲಯ ಕುಲಪತಿಗಳ ಗಮನಕ್ಕೆ ತಂದಾಗ ನಮಗೂ ಮಹಾರಾಣಿ ಕಾಲೇಜಿಗೂ ಯಾವುದೇ ಸಂಬಂಧವಿಲ್ಲ, ಇದು ಸರ್ಕಾರದ ಕೆಳಗೆ ಬರುತ್ತದೆ ಎಂದು ಹೇಳಿದ್ದರು. ಜಂಟಿ ನಿರ್ದೇಶಕರ ಜತೆ ಮಾತನಾಡಿದಾಗ ಇದು ಮೈಸೂರು ವಿಶ್ವವಿದ್ಯಾಲಯದ ಸಮಸ್ಯೆ ನಮಗೆ ಸಂಬಂಧಪಟ್ಟದಲ್ಲ ಎಂದು ಹೇಳಿದ್ದರು.

ವಿಶ್ವವಿದ್ಯಾಲಯದ ಮತ್ತು ಜಂಟಿ ನಿರ್ದೇಶಕರ ನಿರ್ಲಕ್ಷ್ಯ ಧೋರಣೆ ವಿದ್ಯಾರ್ಥಿಗಳಲ್ಲಿ ಆಕ್ರೋಶವನ್ನು ಉಂಟು ಮಾಡಿದೆ. ಪರೀಕ್ಷೆಗೆ ಇನ್ನು 20 ದಿನಗಳು ಬಾಕಿ ಇದೆ. ಆದರೂ ಪ್ರತಿದಿನವೂ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಅಲೆಯುತ್ತಿದ್ದಾರೆ. ಆದರೆ ಅವರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷದವರೆಗೂ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸುತ್ತಿರಲಿಲ್ಲ. ಜೀರೋ ಪೇಮೆಂಟ್ ಇರುತ್ತಿತ್ತು. ಆದರೆ ಈ ವರ್ಷ ಏಕಾಏಕಿ ವಿದ್ಯಾರ್ಥಿಗಳಿಗೆ 1700 ರಿಂದ 2000 ರೂ. ವರೆಗೆ ಪರೀಕ್ಷಾ ಶುಲ್ಕವನ್ನು ಪಾವತಿಸುವಂತೆ ಒತ್ತಾಯಿಸುತ್ತಿದ್ದಾರೆ. ಇದರ ಜತೆಗೆ ಒಬಿಸಿ ಹಾಗೂ ಇತರ ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವು ಹಿಂದಿನ ವರ್ಷಕ್ಕಿಂತ ಈ ವರ್ಷ ಹೆಚ್ಚು ಮಾಡಿದ್ದಾರೆ. ಇದರ ವಿರುದ್ಧ ಮಹಾರಾಣಿ ಪದವಿ

ಕಾಲೇಜಿನ ವಿದ್ಯಾರ್ಥಿಗಳು ಎರಡು ಬಾರಿ ಪ್ರತಿಭಟನೆ ಮಾಡಿದ್ದಾರೆ. ಆದರೆ ಅವರಿಗೆ ಯಾವುದೇ ರೀತಿ ನ್ಯಾಯ ದೊರಕಿಲ್ಲ ಎಂದು ದೂರಿದರು.

ಬಹುಪಾಲು ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ಸೂಕ್ತ ಸಮಯಕ್ಕೆ ವಿದ್ಯಾರ್ಥಿ ವೇತನ ಬಂದಿಲ್ಲ. ಆದ್ದರಿಂದ ಶುಲ್ಕವನ್ನು ಕಟ್ಟಲು ಬಹಳ ಕಷ್ಟವಾಗಿದೆ. ಮಹಾರಾಣಿ ಕಾಲೇಜಿಗೆ ಸುತ್ತಮುತ್ತಲಿನ ಎಲ್ಲ ಹಳ್ಳಿಯ ಬಡ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಪಡೆದುಕೊಳ್ಳಲು ಬರುತ್ತಾರೆ. ಆದರೆ ಸರ್ಕಾರ ಮತ್ತು ಮೈಸೂರು ವಿಶ್ವವಿದ್ಯಾಲಯ ತನ್ನ ವ್ಯಾಪಾರ ಧೋರಣೆಯಿಂದ ವಿದ್ಯಾರ್ಥಿಗಳಿಂದ ಸುಲಿಗೆ ಮಾಡಲು ಪ್ರಯತ್ನಿಸುತ್ತಿದೆ ಎಂದು ದೂರಿದರು.

ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ನಿತಿನ್, ಉಪಾಧ್ಯಕ್ಷೆ ಸ್ವಾತಿ, ಪದಾಧಿಕಾರಿಗಳಾದ ಹೇಮಾ, ಚಂದ್ರಿಕಾ, ಅಂಜಲಿ, ಅಭಿಷೇಕ್, ವಿದ್ಯಾರ್ಥಿನಿಯರಾದ ಸಿಂಚನಾ ,ರಂಜಿತಾ, ಚಂದನಾ, ನಿಕಿತಾ, ರಕ್ಷಿತಾ ಇದ್ದರು.