ಜಿಲ್ಲೆ

ಪರೀಕ್ಷಾ ತರಬೇತಿ ಸದುಪಯೋಗಪಡಿಸಿಕೊಳ್ಳಿ

ಹನೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೀಡಲಾಗುವ ತರಬೇತಿಯನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮೈಸೂರು ಮಹೇಶ್ ಎಜುಕೇಷನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕ ಡಾ.ರಾಘವೇಂದ್ರ ಭಾರಧ್ವಾಜ್ ಹೇಳಿದರು.

ಪಟ್ಟಣದ ಶ್ರೀ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಿಇಟಿ ಹಾಗೂ ನೀಟ್ ಪರೀಕ್ಷೆ ತರಬೇತಿ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಪ್ರತಿ ವರ್ಷ ನೀಟ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆ ಎದುರಿಸುವಾಗ ವಿದ್ಯಾರ್ಥಿಗಳು ಪೂರ್ವ ತಯಾರಿ ಮಾಡಿಕೊಳ್ಳಬೇಕಿದೆ. ಈ ದಿಸೆಯಲ್ಲಿ ತರಬೇತಿ ಅಗತ್ಯವಾಗಿದೆ. ಜತೆಗೆ ಸಾಮಾನ್ಯ ಜ್ಞಾನ ಅಧ್ಯಯನದ ಕಡೆಗೂ ಹೆಚ್ಚಿನ ಗಮನ ನೀಡಬೇಕು. ಆದ್ದರಿಂದ ಪ್ರತಿಯೊಬ್ಬರೂ ತರಬೇತಿಯ ಪ್ರಯೋಜನ ಪಡೆದುಕೊಳ್ಳಬೇಕು. ಇದರಿಂದ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಮೈಸೂರು ಶ್ರೀ ವಿದ್ಯಾಕೀರ್ತಿ ಅಕಾಡೆಮಿ ಟ್ರಸ್ಟ್‌ನ ಡಾ.ನವೀನ್‌ಕುಮಾರ್, ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸಂಚಾಲಕ ಎಂ.ರಾಜೇಂದ್ರನ್, ಕಾರ್ಯದರ್ಶಿ ಸುರೇಶ್‌ನಾಯ್ಡು, ಪ್ರಾಂಶುಪಾಲ ಮಧುಸೂದನ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.