ಜಿಲ್ಲೆ

ಪರೀಕ್ಷಾ ಗೌಪ್ಯತೆ ಹಾಗೂ ಪಾವಿತ್ರ್ಯ ಕಾಪಾಡಿ

ಚಿತ್ರದುರ್ಗ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆೆ-03 ಜೂ.24 ರಿಂದ ಜುಲೈ 5 ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ 2532 ವಿದ್ಯಾರ್ಥಿಗಳು ನೋಂದಾಯಿಸಿದ್ದು, 6 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಪರೀಕ್ಷೆ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಪರೀಕ್ಷೆ ಗೌಪ್ಯತೆ, ಪಾವಿತ್ರೃ ಕಾಪಾಡಬೇಕು. ಪಿಯು ಇಲಾಖೆ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನವನ್ನು ತಪ್ಪದೆ ಪಾಲಿಸಬೇಕು. ಈ ಪೂರಕ ಪರೀಕ್ಷೆಯನ್ನೂ ಗಂಭೀರವಾಗಿ ಪರಿಗಣಿಸಬೇಕು. ಎಲ್ಲ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳೊಂದಿಗೆ ವೆಬ್‌ಕಾಸ್ಟಿಂಗ್ ಇರುತ್ತದೆ, ವೀಕ್ಷಕರನ್ನೂ ನೇಮಿಸಲಾಗಿದೆ ಎಂದರು.
ಕೇಂದ್ರಗಳ ಸುತ್ತ ಅಗತ್ಯ ಬಂದೋಬಸ್ತ್ ಕಲ್ಪಿಸಬೇಕು. ಪೊಲೀಸ್ ರಕ್ಷಣೆಯಲ್ಲೇ ಪ್ರಶ್ನೆಪತ್ರಿಕೆಗಳನ್ನು ಕೇಂದ್ರಗಳಿಗೆ ತಲುಪಿಸಬೇಕು. ಪ್ರಶ್ನೆ ಹಾಗೂ ಉತ್ತರ ಪತ್ರಿಕೆಗಳ ಪಾಲನೆಗಾಗಿ ನೇಮಿಸಿರುವ ಅಧಿಕಾರಿಗಳೇ ಈ ಕಾರ್ಯವನ್ನು ನಿರ್ವಹಿಸಬೇಕು, ಅನ್ಯರನ್ನು ನಿಯೋಜಿಸುವಂತಿಲ್ಲವೆಂದು ಸೂಚಿಸಿದರು.
ಪರೀಕ್ಷಾ ಕಾರ‌್ಯ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸೀಮಿತವಲ್ಲ, ಜಿಲ್ಲಾ, ತಾಲೂಕು ಆಡಳಿತ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಬೇಕು. ಪರೀಕ್ಷಾ ದಿನಾಂಕಗಳಂದು ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಬೆಸ್ಕಾಂ ನೋಡಿಕೊಳ್ಳಬೇಕು ಎಂದರು.
ಪಿಯು ಡಿಡಿ ಆರ್.ಪುಟ್ಟಸ್ವಾಮಿ ಮಾತನಾಡಿ, ಚಿತ್ರದುರ್ಗದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ ಹಾಗೂ ಮೊಳಕಾಲ್ಮೂರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳು, ಹೊಳಲ್ಕೆರೆ ಕೊಟ್ರನಂಜಪ್ಪ ಪದವಿಪೂರ್ವ ಕಾಲೇಜು ಪರೀಕ್ಷೆ ನಡೆಯಲಿದೆ. 2532 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕೇಂದ್ರಗಳ ಸುತ್ತ 200 ಮೀಟರ್ 144 ಸೆಕ್ಷನ್ ಜಾರಿ ಮಾಡಿ ಡಿಸಿ ಆದೇಶಿಸಿದ್ದಾರೆ. ಕೇಂದ್ರಗಳ ಮುಖ್ಯಅಧೀಕ್ಷಕರು ಗೈರಾದ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‌ಲೈನ್ ಮೂಲಕ ದಾಖಲಿಸಬೇಕು. ವಿದ್ಯಾರ್ಥಿಗಳು ಮೊಬೈಲ್ ಫೋನ್ ತರುವುದನ್ನು ನಿಷೇಧಿ ಸಲಾಗಿದೆ ಎಂದರು.
ಬಿ.ಬಿ.ಫಾತೀಮಾ, ಡಾ.ನಾಗವೇಣಿ, ರಾಜೇಶ್‌ಕುಮಾರ್ ಮತ್ತಿತರ ತಹಸೀಲ್ದಾರ್‌ಗಳು,ತಾಲೂಕು ವೈದ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು,ಪಪೂ ಕಾಲೇಜುಗಳ ಪ್ರಾಚಾರ‌್ಯರು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.