ಕೋಲಾರ: ಮಕ್ಕಳ ಆರೋಗ್ಯ ರಕ್ಷಣೆಯೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಪ್ರತಿ 2 ಕೇಂದ್ರಗಳಿಗೆ ಐವರು ಸದಸ್ಯರನ್ನೊಳಗೊಂಡ ಪರೀಕ್ಷಾ ಕಾರ್ಯಪಡೆ ರಚಿಸಲಾಗಿದೆ ಎಂದು ಬಿಇಒ ಕೆ.ಎಸ್.ನಾಗರಾಜಗೌಡ ಹೇಳಿದರು.
ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಶನಿವಾರ ಬಿಆರ್‌ಪಿ, ಇಸಿಒ, ಸಿಆರ್‌ಪಿ, ಬಿಐಇಆರ್‌ಸಿಗಳ ಸಭೆಯಲ್ಲಿ ಕೈಗೊಳ್ಳಬೇಕಾದ ಮುನ್ನಚ್ಚರಿಕೆಗಳ ಕುರಿತು ಸೂಚನೆ ನೀಡಿದರು.
ಪ್ರಾಥಮಿಕ ಶಿಕ್ಷಣ ಸಚಿವರು ವಿಡಿಯೋ ಕಾನ್ಫರೆನ್ಸ್‌ನಲ್ಲಿ ನೀಡಿರುವ ಸೂಚನೆ ಹಾಗೂ ಇಲಾಖೆ ಸುತ್ತೋಲೆಗಳಂತೆ ಮಕ್ಕಳನ್ನು ಸೋಂಕಿನಿಂದ ರಕ್ಷಿಸುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಬಿಆರ್‌ಪಿ ಹಾಗೂ ಇಸಿಒ ನೇತೃತ್ವದ ಐವರ ತಂಡ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮ ಪರಿಶೀಲಿಸುವ ಜತೆಗೆ ತಾವೇ ಉಸ್ತುವಾರಿ ವಹಿಸಿ ನೋಡಿಕೊಳ್ಳಬೇಕು ಎಂದರು.
ಸಚಿವರ ಸೂಚನೆಯಂತೆ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಶಾಲಾ ಆವರಣ, ಕೊಠಡಿ, ಶೌಚಗೃಹ, ಕಚೇರಿಗಳನ್ನು ಸ್ಯಾನಿಟೈಸ್ ಮಾಡಿ ಸೋಂಕು ಮುಕ್ತತೆ ಕುರಿತು ದೃಢಪಡಿಸಿಕೊಳ್ಳಬೇಕು ಎಂದರು.
ಪರೀಕ್ಷಾ ಕೇಂದ್ರದ ಕೊಠಡಿ ಸಂಖ್ಯೆಯನ್ನು ಮಕ್ಕಳ ಮೊಬೈಲ್‌ಗೆ ಮೆಸೇಜ್ ಮೂಲಕ ತಿಳಿಸಲು ಕ್ರಮ ವಹಿಸಲಾಗಿದೆ. ಕೇಂದ್ರಕ್ಕೆ ಮಕ್ಕಳು ಬರುವಾಗ ದೈಹಿಕ ಅಂತರ ಕಾಯ್ದುಕೊಳ್ಳಲು ಗೇಟ್ ಸಮೀಪದಿಂದಲೇ ಪ್ರತ್ಯೇಕ ಬಾಕ್ಸ್ ರಚಿಸಿ ಅದರಲ್ಲಿ ನಿಂತು ಮುಂದೆ ಸಾಗುವಂತೆ ನೋಡಿಕೊಳ್ಳಲಾಗುವುದು. ಥರ್ಮಲ್ ಸ್ಕ್ರೀನಿಂಗ್ ಮಾಡಿ ನಂತರ ಒಳಗೆ ಕಳುಹಿಸಲಾಗುವುದು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ ಮಾತನಾಡಿ, ಜ್ವರ, ನೆಗಡಿ ಮತ್ತಿತರ ಆರೋಗ್ಯ ಸಮಸ್ಯೆ ಇರುವ ಮಕ್ಕಳಗೆ ಪ್ರತ್ಯೇಕ ಸ್ಯಾನಿಟೈಸ್ ಮಾಡಿದ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಎಲ್ಲ ದೈಹಿಕ ಶಿಕ್ಷಣ ಶಿಕ್ಷಕರನ್ನು ಪರೀಕ್ಷಾ ಕಾರ್ಯಕ್ಕೆ ನೇಮಿಸಿಕೊಳ್ಳಲಾಗಿದೆ. ದೈಹಿಕ ಅಂತರ ಕಾಯ್ದುಕೊಳ್ಳಲು ಮಕ್ಕಳಿಗೆ ಮಾರ್ಗದರ್ಶನ ನೀಡುವರು ಎಂದರು.
ಬಿಆರ್‌ಪಿಗಳಾದ ಡಿ.ಎಂ.ನಾಗರಾಜ್, ಸವಿತಾ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ರಾಘವೇಂದ್ರ, ಆರ್.ಶ್ರೀನಿವಾಸನ್, ವೆಂಕಟಾಚಲಪತಿ, ಮುನಿರಾಜು, ಬೈರಡ್ಡಿ, ಬಿಐಇಆರ್‌ಸಿಗಳಾದ ಚಂದ್ರಯ್ಯ, ವಿನುತಾ, ವೆಂಕಟರಾಂ ಉಪಸ್ಥಿತರಿದ್ದರು.