ಜಿಲ್ಲೆ

ಪರೀಕ್ಷಾ ಕರ್ತವ್ಯದ ಡಿಎ ಮರು ಪರಿಶೀಲಿಸಲಿ: ಮಾಜಿ ಎಂಎಲ್‌ಸಿ ಮರಿತಿಬ್ಬೇಗೌಡ ಆಗ್ರಹ

ಮೈಸೂರು: ಕಳೆದ ಸಾಲಿನಲ್ಲಿ ಪರೀಕ್ಷಾ ಕರ್ತವ್ಯದ ಪ್ರತಿ ದಿನಕ್ಕೆ 690 ರೂ. ಡಿಎ ನೀಡಲಾಗುತ್ತಿತ್ತು. ಆದರೆ ಈ ಬಾರಿ 400 ರೂ. ನೀಡಲಾಗುತ್ತಿದ್ದು, ವರ್ತಮಾನದ ದೈನಂದಿನ ಜೀವನ ದುಬಾರಿಯಾಗಿರುವ ಈ ಸಂದರ್ಭದಲ್ಲಿ ಇದು ವೈಜ್ಞಾನಿಕ ನಿರ್ದೇಶನವೇ? ಇದನ್ನು ಮರುಪರಿಶೀಲಿಸಿ ಸರಿಪಡಿಸಿ, ಕೂಡಲೇ ಮರು ಆದೇಶ ಹೊರಡಿಸಬೇಕು ಎಂದು ಮಾಜಿ ಎಂಎಲ್‌ಸಿ ಮರಿತಿಬ್ಬೇಗೌಡ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪಿಯುಸಿ ಪರೀಕ್ಷಾ ಕಾರ್ಯಕ್ಕೆ ಜಂಟಿ ಪರೀಕ್ಷಕರಾಗಿ, ಪ್ರಶ್ನೆಪತ್ರಿಕೆಗಳ ಪಾಲಕರಾಗಿ ಹಾಗೂ ಸ್ಕ್ಯಾಡ್ ಕರ್ತವ್ಯಕ್ಕಾಗಿ ಕಾಲೇಜು ವಿಭಾಗದ ಪ್ರಾಂಶುಪಾಲರು ಮತ್ತು ಉಪನ್ಯಾಸಕರನ್ನು ನೇಮಿಸಿಕೊಂಡಿರುವುದು ಸ್ವಾಗತಾರ್ಹ.

ಈ ಬಾರಿ ಪರೀಕ್ಷಾ ಕರ್ತವ್ಯದ ವಿವರಗಳನ್ನು ಕಂಪ್ಯೂಟರೀಕರಣ ಮಾಡಿರುವುದು ಸಂತಸದ ವಿಷಯ. ಆದರೆ ಕಂಪ್ಯೂಟರೀಕರಣದಲ್ಲಿ ಇರುವುದಿಲ್ಲ. ವ್ಯತ್ಯಾಸವಿದೆ. ಉದಾಹರಣೆಗೆ ಕಸ್ಟೋಡಿಯನ್ ಅಧಿಕಾರಿಗಳಿಗೆ ಆದೇಶದಲ್ಲಿ 2076 ರೂ. ನಿರ್ದೇಶಿಸಲಾಗಿದೆ. ಆದರೆ ಕಂಪ್ಯೂಟರನಲ್ಲಿ 691 ರೂ. ನಮೂದಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಲ್ಲಿವರೆಗೂ ನಿಯೋಜನೆಯಾದ ಅಧಿಕಾರಿಗಳಿಗೆ ಪರೀಕ್ಷೆಯ ಪೂರ್ಣ ಅವಧಿಗೆ ಡಿ ಎ ನೀಡಲಾಗುತ್ತಿತ್ತು. ಆದರೆ ಈ ಬಾರಿ ಪರೀಕ್ಷಾ ಕಾರ್ಯವನ್ನು ನಿರ್ವಹಿಸಿದ ದಿನದಂದು ಮಾತ್ರ ಡಿ.ಎ ನೀಡುವಂತೆ ನಿರ್ದೇಶಿಸಿಲಾಗಿದೆ. ಪರೀಕ್ಷಾ ಕರ್ತವ್ಯ ಇರಲಿ ಅಥವಾ ಇಲ್ಲದಿರಲಿ ನಿರ್ವಹಿಸುವ ಸ್ಥಳಗಳಿಗೆ ಹೋಗಿ ಅಲ್ಲೇ ಉಳಿಯಬೇಕಾಗುತ್ತದೆ. ಅಧಿಕಾರಿಗಳಿಗೆ ಈ ಅವಧಿಯ ಡಿ.ಎ ನೀಡದಿದ್ದರೆ ಹೇಗೆ, ಅವರಿಗೆ ತೊಂದರೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ

ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ಮತ್ತು ಅವರ ಶೈಕ್ಷಣಿಕ ಹಿತದೃಷ್ಟಿಯಿಂದ ಆನ್‌ಲೈನ್ ತರಗತಿ ಮಾ.24ರಿಂದ ಪ್ರತಿದಿನ ನಾಲ್ಕೈದು ಗಂಟೆಗಳ ಕಾಲ ನಡೆಸಲಾಗುತ್ತಿದೆ. ಇದಲ್ಲದೆ ಏ.1ರಿಂದ ಬೇಸಿಗೆ ರಜೆಯನ್ನು ಸಹ ಘೋಷಿಸಲಾಗಿದೆ. ಶಿಕ್ಷಣ ಇಲಾಖೆ ಬಿಡುವುಳ್ಳ ಇಲಾಖೆ ಎಂದು ಸಹ ಕಾನೂನು ಹೇಳುತ್ತದೆ.

ಆದರೆ, ಈ ರಜಾ ದಿನಗಳಂದು ವಿಜ್ಞಾನ ಉಪನ್ಯಾಸಕರು ಹಾಜರಿರುವಂತೆ ನಿರ್ದೇಶಿಸಲಾಗಿದೆ. ಇದು ಬಿಡುವುಳ್ಳ ಇಲಾಖೆಯ ನಿಯಮಾನುಸಾರ ಕಾನೂನುಬಾಹಿರ ಮತ್ತು ಅವೈಜ್ಞಾನಿಕವಲ್ಲವೇ? ಅವರ ಹಕ್ಕನ್ನು ಕಸಿದಂತಾಗುವುದಿಲ್ಲವೇ? ಆದ್ದರಿಂದ ಕೆಸಿಎಸ್‌ಆರ್ ನಿಯಮಾವಳಿಯಂತೆ ಈ ಬೋಧಕರಿಗೆ ರಜಾ ಅವಧಿಯಲ್ಲಿ ಕರ್ತವ್ಯಕ್ಕೆ ನೇಮಿಸಿಕೊಂಡರೆ ಗಳಿಕೆ ರಜೆ (ಇಎಲ್) ಮತ್ತು ಎಚ್‌ಪಿಎಲ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.