ಧಾರವಾಡ: ಪ್ರವಾಹದಿಂದ ಬಡ, ಮಧ್ಯಮ ವರ್ಗದ ಜನರು, ರೈತರ ಸ್ಥಿತಿ ತೀರ ಹದಗೆಟ್ಟಿದೆ. ಪರಿಹಾರಧನ ವಿತರಣೆ, ನೆರೆ ಕಾಮಗಾರಿಗಳಲ್ಲಿ ಜಾತಿ, ಪಕ್ಷ ರಾಜಕಾರಣ ಮಾಡುವುದು ಸರಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮೀಣ ಭಾಗದಲ್ಲಿ ಸಂಚರಿಸಿ ವಸ್ತುಸ್ಥಿತಿ ಅರಿಯುವ ಪ್ರಯತ್ನ ಮಾಡಬೇಕು ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಒತ್ತಾಯಿಸಿದರು.
ನೆರೆ ಪರಿಹಾರದಲ್ಲಿ ತಾರತಮ್ಯ, ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ನಗರದ ಜಿ.ಪಂ. ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಸದಸ್ಯರನ್ನು ಸೋಮವಾರ ಭೇಟಿ ಮಾಡಿದ ನಂತರ ಅವರು ಮಾತನಾಡಿದರು.
ಜಿ.ಪಂ. ಸದಸ್ಯರಿಗೆ ಸ್ಥಳೀಯ ಸಮಸ್ಯೆಗಳ ಅರಿವು ಇರುತ್ತದೆ. ಎಲ್ಲವನ್ನೂ ಶಾಸಕ, ಸಚಿವ, ಸಂಸದರು ಮಾಡಲು ಆಗುವುದಿಲ್ಲ. ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು ಹಿರಿಯರು. ಜಿ.ಪಂ. ಸದಸ್ಯರು 10 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಮಾನವೀಯತೆ ದೃಷ್ಟಿಯಿಂದಲಾದರೂ ಭೇಟಿ ನೀಡಿ ಅಹವಾಲು ಆಲಿಸಬೇಕಿತ್ತು ಎಂದರು.
ಮಳೆಯಿಂದ ರೈತರ ಜಮೀನುಗಳ ಮಣ್ಣು ಕಿತ್ತು ಹೋಗಿದೆ. ಎಷ್ಟೋ ರೈತರು ಹಿಂಗಾರು ಬಿತ್ತನೆ ಮಾಡಿಲ್ಲ. ಮನೆ ಹಾನಿ ಪರಿಹಾರದಲ್ಲಿ ಬಿಜೆಪಿ ಕಾರ್ಯಕರ್ತರು, ಅವರ ಸಂಬಂಧಿಕರಿಗೆ ಪೂರ್ಣ ಹಾನಿ ಎಂದು ನಮೂದಿಸಲಾಗುತ್ತಿದೆ. ನೈಜ ಫಲಾನುಭವಿಗಳು ಕಚೇರಿಗಳಿಗೆ ಅಲೆದಾಡಿದರೂ ಪ್ರಯೋಜನವಾಗುತ್ತಿಲ್ಲ. ಉಸ್ತುವಾರಿ ಸಚಿವರು ಇದನ್ನು ಗಮನಿಸುತ್ತಿಲ್ಲ. ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಜನಸಂಪರ್ಕ ಸಭೆ ಜರುಗಿಸುವುದನ್ನೇ ಮರೆತಿದ್ದಾರೆ ಎಂದು ಆರೋಪಿಸಿದರು.
ಜಿ.ಪಂ. ಸದಸ್ಯರ ಧರಣಿ ವಿಷಯವನ್ನು ವಿಧಾನಸಭೆ ಪ್ರತಿಪಕ್ಷ ನಾಯಕರ ಗಮನಕ್ಕೆ ತರಲಾಗುವುದು. ಮುಖ್ಯಮಂತ್ರಿಯವರು ಈ ಬಗ್ಗೆ ಗಮನ ಹರಿಸಬೇಕು ಎಂಬುದು ಕಳಕಳಿಯ ವಿನಂತಿ. ನೆರೆ ಪರಿಹಾರ ವಿಷಯದಲ್ಲಿ ರಾಜಕಾರಣ ಮಾಡುವುದಿಲ್ಲ. ಕಷ್ಟದಲ್ಲಿರುವವರ ಪರ ಇದ್ದು, ಧರಣಿಯನ್ನು ಬೆಂಬಲಿಸುತ್ತೇನೆ ಎಂದರು. ಜಿ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಸದಸ್ಯರಾದ ನಿಂಗಪ್ಪ ಘಾಟಿನ್, ಉಮೇಶ ಹೆಬಸೂರ, ಚನ್ನಬಸಪ್ಪ ಮಟ್ಟಿ, ಕರೆಪ್ಪ ಮಾದರ, ರೇಣುಕಾ ಇಬ್ರಾಹಿಂಪುರ, ಈರವ್ವ ದಾಸನಕೊಪ್ಪ, ಇತರರಿದ್ದರು.
ಸ್ವಚ್ಛತಾ ಕಾರ್ಯ: ಹತ್ತು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಜನಪ್ರತಿನಿಧಿಗಳು ಸೋಮವಾರ ಬೆಳಗ್ಗೆ ಜಿ.ಪಂ. ಆವರಣದಲ್ಲಿ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ನಡೆಸಿದರು. ಕಸ ಹೊಡೆದು, ಗಿಡಗಂಟಿಗಳನ್ನು ಕಿತ್ತು ಸ್ವಚ್ಛಗೊಳಿಸಿದರು.