ಜಿಲ್ಲೆ

ಪರಿಹಾರಕ್ಕಾಗಿ ನೋಂದಣಿಗೆ ದುಂಬಾಲು

ಹುಬ್ಬಳ್ಳಿ: ರಾಜ್ಯ ಸರ್ಕಾರದ ಶ್ರಮಿಕರ ಪ್ಯಾಕೇಜ್ ಪರಿಹಾರ ಪಡೆದುಕೊಳ್ಳಲು ಬಹಳಷ್ಟು ಕಟ್ಟಡ ಕಾರ್ವಿುಕರು ಇದೀಗ ಎಚ್ಚರಗೊಂಡಂತಿದೆ.

ಕರೊನಾ ಸೋಂಕು ಹರಡದಂತೆ ಲಾಕ್​ಡೌನ್ ಘೋಷಣೆಯಾದ ನಂತರ ಶ್ರಮಿಕರ ಅದರಲ್ಲೂ ಕಟ್ಟಡ ಕಾರ್ವಿುಕರ ಸಂಕಷ್ಟದ ಬದುಕಿಗೆ ಸ್ಪಂದಿಸಿದ ರಾಜ್ಯ ಸರ್ಕಾರ ಅಂದು ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿತ್ತು. ಅದರಂತೆ ಪ್ರತಿಯೊಬ್ಬ ಕಟ್ಟಡ ಕಾರ್ವಿುಕನಿಗೆ ಐದು ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ.

ಇದನ್ನು ಪಡೆಯಲು ಈಗಾಗಲೇ ಕಾರ್ವಿುಕ ಇಲಾಖೆಯಲ್ಲಿ ನೋಂದಣಿಯಾದ ಕಟ್ಟಡ ಕಾರ್ವಿುಕರು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್​ಬುಕ್ ನೀಡಿದರೆ ಸಾಕು ಪರಿಹಾರ ಹಣ ಖಾತೆಗೆ ಜಮಾ ಆಗಲಿದೆ.

ಈ ವಿಷಯ ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ನೋಂದಣಿ ಮಾಡದ ಸಾವಿರಾರು ಕಾರ್ವಿುಕರು ಕಾರ್ವಿುಕ ಇಲಾಖೆಗೆ ಎಡತಾಕುತ್ತಿದ್ದಾರೆ. ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಿ ಎಂದು ದುಂಬಾಲು ಬಿದ್ದಿದ್ದಾರೆ. ಇನ್ನೂ ಕೆಲವರು ಮಧ್ಯವರ್ತಿಗಳಿಗೆ ಜೋತು ಬಿದ್ದಿದ್ದಾರೆ.

ಹೇಗಾದರೂ ಮಾಡಿ ತಮ್ಮ ಹೆಸರು ತಕ್ಷಣಕ್ಕೆ ನೋಂದಣಿ ಮಾಡಿಸಿಕೊಂಡು ಗುರುತಿನ ಚೀಟಿ ಪಡೆದು ಪರಿಹಾರ ತೆಗೆದುಕೊಳ್ಳಬೇಕೆಂದು ಪ್ರಯತ್ನ ನಡೆಸಿದ್ದಾರೆ. ಆದರೆ, ಮಾರ್ಚ್ 13ರವರೆಗೆ ಯಾರು ನೋಂದಣಿ ಮಾಡಿಸಿಕೊಂಡಿರುತ್ತಾರೋ ಅವರಿಗೆ ಮಾತ್ರ ಪರಿಹಾರ ಎಂದು ಸರ್ಕಾರ ಹೇಳಿದೆ.

ಇದು ಗೊತ್ತಿರದ ಎಷ್ಟೋ ಕಾರ್ವಿುಕರು ತಕ್ಷಣದ ನೋಂದಣಿಗಾಗಿ ಪರದಾಡುತ್ತಿದ್ದಾರೆ. ಕಾರ್ವಿುಕರ ಹೆಸರು ನೋಂದಣಿ ಪ್ರಕ್ರಿಯೆ ಉಚಿತವಾಗಿದ್ದರೂ ಕೆಲವರು ಹಣ ಕೊಟ್ಟು ಒತ್ತಡ ಹೇರುತ್ತಿದ್ದಾರೆ. ಅದಕ್ಕಾಗಿಯೇ ಕೆಲವೆಡೆ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ ಎನ್ನಲಾಗಿದೆ.

ಇಲ್ಲಿಯ ನ್ಯೂ ಕಾಟನ್ ಮಾರ್ಕೆಟ್ ಶ್ರೀನಾಥ ಕಾಂಪ್ಲೆಕ್ಸ್​ನಲ್ಲಿರುವ ಕಾರ್ವಿುಕ ಇಲಾಖೆ ಕಚೇರಿಗೂ ನೇರವಾಗಿ ಭೇಟಿ ನೀಡಿ ನೋಂದಣಿ ಅರ್ಜಿ ಸಲ್ಲಿಸುತ್ತಿದ್ದಾರೆ. ಜತೆಗೆ ಪರಿಹಾರ ಬಿಡುಗಡೆಗೆ ಅಗತ್ಯ ದಾಖಲೆ ಸಲ್ಲಿಸುತ್ತಿದ್ದಾರೆ. ಹೀಗೆ ಅರ್ಜಿ ನೀಡುವವರಿಗಾಗಿಯೇ ಕಚೇರಿ ಪ್ರವೇಶ ದ್ವಾರದಲ್ಲಿ ಬಾಕ್ಸ್ ಇಡಲಾಗಿದೆ. ಅದರಲ್ಲಿ ಭರ್ತಿ ಮಾಡಿದ ಅರ್ಜಿ ಹಾಕಿ ಹೋಗುತ್ತಿದ್ದಾರೆ. ಮೇ ತಿಂಗಳೊಂದರಲ್ಲೇ 20 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎನ್ನಲಾಗಿದೆ.

ಪರಿಹಾರ ಮಂಜೂರು: ಧಾರವಾಡ ಜಿಲ್ಲೆಯಲ್ಲಿ 41,162 ಕಟ್ಟಡ ಕಾರ್ವಿುಕರಿಗೆ ಹಾಗೂ 17,840 ನರೇಗಾ ಕೆಲಸಗಾರರು ಸೇರಿ ಒಟ್ಟು 59,002 ಫಲಾನುಭವಿಗಳಿಗೆ ಐದು ಸಾವಿರ ರೂ. ಪರಿಹಾರ ಪ್ಯಾಕೇಜ್ ಮಂಜೂರಾಗಿದೆ. ಇನ್ನೂ 18 ಸಾವಿರ ಕಟ್ಟಡ ಕಾರ್ವಿುಕರು ಬಾಕಿ ಇದ್ದು, ಅವರೆಲ್ಲ ಸಮರ್ಪಕ ದಾಖಲೆ ನೀಡಿಲ್ಲ. ದಾಖಲೆ ಕೊಟ್ಟರೆ ಅವರಿ ಖಾತೆಗೂ ಹಣ ಜಮಾ ಆಗಲಿದೆ ಎಂದು ಕಾರ್ವಿುಕ ಇಲಾಖೆ ತಿಳಿಸಿದೆ.

ಈಗಲೂ ಅವಕಾಶ ಇದೆ: ಈಗಾಗಲೇ ನೋಂದಣಿ ಕಾರ್ಡ್ ಹೊಂದಿದವರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್​ನ್ನು ಕಾರ್ವಿುಕ ಇಲಾಖೆಗೆ ನೀಡಿದರೆ ಅವುಗಳನ್ನು ಪರಿಶೀಲನೆ ಮಾಡಿ ಪರಿಹಾರ ಮಂಜೂರಿಗೆ ಈಗಲೂ ಅವಕಾಶ ಇದೆ. ಕಟ್ಟಡ ಕಾರ್ವಿುಕರು ಇದರ ಪ್ರಯೋಜನ ಪಡೆಯಬೇಕು. ಮಾರ್ಚ್ 13ರ ನಂತರ ನೋಂದಣಿಯಾದವರಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕು. ಆದರೆ, ಅವರು ಇಲಾಖೆಯ ಇತರ ಸೌಲಭ್ಯಗಳಿಗೆ ಅರ್ಹರಾಗುತ್ತಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಏನೇನು ದಾಖಲೆ ಬೇಕು?: ಕಟ್ಟಡ ಕಾರ್ವಿುಕರು ನೋಂದಣಿ ಮಾಡಿಕೊಂಡಿದ್ದರೆ ತಮ್ಮ ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಪಾಸ್​ಬುಕ್ ಜೆರಾಕ್ಸ್ ನೀಡಬೇಕು. ಈಗಾಗಲೇ ಕಚೇರಿಗೆ ಬಂದು ಈ ದಾಖಲೆ ನೀಡಿದವರಿಗೆ ಪರಿಹಾರ ನೀಡಲು ಬೆಂಗಳೂರು ಕಚೇರಿಗೆ ವಿವರ ಕಳಿಸಲಾಗಿದೆ. ಅಲ್ಲಿಂದಲೇ ಅವರ ಖಾತೆಗೆ ಹಣ ಜಮಾ ಆಗಲಿದೆ. ಮಾರ್ಚ್ 13ರ ವರೆಗೆ ಕಾರ್ವಿುಕ ಇಲಾಖೆಯಲ್ಲಿ ನೋಂದಣಿಯಾದ ಎಲ್ಲ ಕಟ್ಟಡ ಕಾರ್ವಿುಕರಿಗೆ ಪ್ಯಾಕೇಜ್ ಪರಿಹಾರ ಸಿಗಲಿದೆ ಎಂದು ಕಾರ್ವಿುಕ ಇಲಾಖೆ ಸಹಾಯಕ ಆಯುಕ್ತೆ ಮೀನಾ ಪಾಟೀಲ ತಿಳಿಸಿದ್ದಾರೆ.