ಶ್ರೀರಂಗಪಟ್ಟಣ: ಸರ್ಕಾರ ಪರಿಹಾರ ನೀಡದೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಜಮೀನಿನ ಮಾಲೀಕರು ತಾಲೂಕಿನ ದೊಡ್ಡಪಾಳ್ಯ ಸರ್ಕಾರಿ ಆಯುಷ್ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಬೀಗ ಹಾಕಿ, ಆಸ್ಪತ್ರೆಗೆ ತೆರಳುವ ಮಾರ್ಗದ ರಸ್ತೆಗೆ ಮಣ್ಣು ಸುರಿದು ಸಂಚಾರಕ್ಕೂ ಅಡ್ಡಿಪಡಿಸಿದರು.
ದೊಡ್ಡಪಾಳ್ಯ ಗ್ರಾಮದ ಉದಯ್ ಶೇಖರ್ ಮತ್ತು ಗುಣಶೇಖರ್ ಎಂಬುವರು ಮುಂಡುಗದೊರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮ ಜಮೀನಿನಲ್ಲಿ ನಿರ್ಮಾಣವಾಗಿರುವ ದೊಡ್ಡಪಾಳ್ಯ ಸರ್ಕಾರಿ ಆಯುಷ್ ಆಸ್ಪತ್ರೆ ಕಟ್ಟಡವನ್ನು ಸರ್ಕಾರ ಈವರೆಗೂ ವಶಕ್ಕೆ ಪಡೆದು ಸರಿಯಾದ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಶುಕ್ರವಾರ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿದರು. ಆಸ್ಪತ್ರೆ ಬಂದ್ ಆಗಿದ್ದರಿಂದ ವೈದ್ಯ ಡಾ.ಶ್ರೀನಿವಾಸ್ ಹಾಗೂ ಸಿಬ್ಬಂದಿ ಸುಮಾರು 4 ಗಂಟೆಗಳ ಕಾಲ ಹೊರಗೆ ನಿಂತರು. ಇದರಿಂದ ರೋಗಿಗಳಿಗೆ ಚಿಕಿತ್ಸೆ ನೀಡದಂತಾಯಿತು.
ಏನಿದು ಘಟನೆ: 1978ರಲ್ಲಿ ದೊಡ್ಡಪಾಳ್ಯ ಗ್ರಾಮದ ಕುಳ್ಳಮ್ಮನ ಮರೀಗೌಡ ಎಂಬುವರು ಮುಂಡುಗದೊರೆ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ. 345/2 ರಲ್ಲಿ ತಮ್ಮ 15 ಗುಂಟೆ ಜಮೀನನ್ನು ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ದಾನ ನೀಡಿದ್ದರು. ಅದರಂತೆ ಸರ್ಕಾರ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಿ ಆಯುಷ್ ಇಲಾಖೆಗೆ ಹಸ್ತಾಂತರಿಸಿತ್ತು.
ಈಗ ನಿರ್ಮಾಣವಾಗಿರುವ ಆಸ್ಪತ್ರೆಯ ಜಮೀನಿನ ಪಕ್ಕದಲ್ಲಿರುವ ಮತ್ತೊಬ್ಬ ಜಮೀನನ ಮಾಲೀಕ ಕೆಲ ವರ್ಷಗಳ ಹಿಂದೆ ತಮ್ಮ ಜಮೀನು ಸರ್ವೇ ಕಾರ್ಯ ನಡೆಸಿದ್ದರು. ಈ ವೇಳೆ ವೇಳೆ ಸರ್ಕಾರ ದಾನವಾಗಿ ನೀಡಿದ್ದ ಸರ್ವೇ ನಂ.345/2 ರ ಬದಲಿಗೆ ಅದೇ ಗ್ರಾಮದ ಕರೀಗೌಡ ಎಂಬುವರ ಸರ್ವೇ 345/3ರಲ್ಲಿ ಆಸ್ಪತ್ರೆ ನಿರ್ಮಿಸಿರುವುದು ಬೆಳಕಿಗೆ ಬಂತು. ಸದ್ಯ ಕರೀಗೌಡರ ಪುತ್ರರಾದ ಉದಯ್ ಶೇಖರ್ ಮತ್ತು ಗುಣಶೇಖರ್ ಸರ್ಕಾರದ ಮೂಲಕ ಆಯುಷ್ ಇಲಾಖೆಗೆ ಮನವಿ ಸಲ್ಲಿಸಿ ತಾವು ಜಮೀನನ್ನು ಸರ್ಕಾರಕ್ಕೆ ಹಸ್ತಾಂತರಿಸಲು ಒಪ್ಪಿದ್ದು, ಅಗತ್ಯ ಕ್ರಮವಹಿಸಿ ಇದಕ್ಕೆ ನೀಡಬೇಕಾದ ಪರಿಹಾರ ಘೋಷಿಸುವಂತೆ ಜಿಲ್ಲಾಧಿಕಾರಿ, ತಹಸೀಲ್ದಾರ್ ಅವರ ಬಳಿ ಮನವಿ ಮಾಡಿದ್ದರು. ಆದರೆ ಈ ಬಗ್ಗೆ ಸರ್ಕಾರ ಗಮನಹರಿಸದ ಕಾರಣ ಶುಕ್ರವಾರ ಜಮೀನಿನ ಮಾಲೀಕರು ಆಸ್ಪತ್ರೆಗೆ ಬೀಗ ಹಾಕಿದ್ದರು.
ಮಾಹಿತಿ ತಿಳಿದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮೀ ಸ್ಥಳಕ್ಕೆ ಆಗಮಿಸಿ ಜಮೀನಿನ ಮಾಲೀಕರೊಂದಿಗೆ ಮಾತುಕತೆ ನಡೆಸಿದರು. ವಿಷಯವನ್ನು ಜಿಲ್ಲಾಧಿಕಾರಿ, ಶ್ರೀರಂಗಪಟ್ಟಣ ತಹಸೀಲ್ದಾರ್ ಅವರ ಗಮನಕ್ಕೆ ತಂದು ಪರಿಹಾರ ಕೊಡಿಸುವ ಭರವಸೆ ನೀಡಿದ ನಂತರ ಆಸ್ಪತ್ರೆಗೆ ಹಾಕಿದ್ದ ಬೀಗ ತೆರವು ಮಾಡಿದರು. ನಂತರ ವೈದ್ಯರು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟರು.