ಮಡಿಕೇರಿ: ಸಂಕಷ್ಟದಲ್ಲಿರುವ ಕೊಡಗಿನ ಬೆಳೆಗಾರರು ಹಾಗೂ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಇಲ್ಲಿಯವರೆಗೆ ನೀಡಿದ ಪರಿಹಾರದ ಮೊತ್ತದ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಬೆಳೆಗಾರರು ಹಾಗೂ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಇಲ್ಲಿಯವರೆಗೆ ನೀಡಿರುವ ಬೆಳೆ ಪರಿಹಾರ, ಬೆಂಬಲ ಬೆಲೆ, ಮಳೆಹಾನಿ ಪರಿಹಾರಗಳ ಕುರಿತು ಶ್ವೇತ ಪತ್ರ ಹೊರಡಿಸಬೇಕೆಂದರು.
ಮಹಾಮಳೆಯಿಂದ ಆದ ನಷ್ಟಕ್ಕೆ ಇಲ್ಲಿಯವರೆಗೆ ಸರ್ಕಾರ ಪರಿಹಾರವನ್ನು ಬಿಡುಗಡೆ ಮಾಡಿಲ್ಲ. ಕೊಡಗಿನ ಬೆಳೆಗಾರರು ಹಾಗೂ ರೈತರು ಪ್ರಾಕೃತಿಕ ವಿಕೋಪ ಮತ್ತು ವನ್ಯಜೀವಿಗಳ ದಾಳಿಯಿಂದ ತತ್ತರಿಸಿ ಹೋಗಿದ್ದು, ಸರ್ಕಾರ ತಕ್ಷಣ ನೆರವಿಗೆ ಬರಬೇಕು. ತೋಟ ಮತ್ತು ಗದ್ದೆಯನ್ನೇ ನಂಬಿ ಬದುಕುತ್ತಿರುವ ಕೊಡಗಿನ ಕೃಷಿಕ ವರ್ಗಕ್ಕೆ ಬೇರೆ ಆದಾಯದ ಮೂಲ ಇಲ್ಲದೆ ಇರುವುದರಿಂದ ಕೇರಳದ ಮಾದರಿಯಲ್ಲಿ ಕಾಫಿ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು ಮತ್ತು ಭತ್ತಕ್ಕೂ ಇದೇ ಮಾದರಿಯನ್ನು ಅನುಸರಿಸಬೇಕು ಎಂದು ಒತ್ತಾಯಿಸಿದರು.
ಅಕಾಲಿಕ ಮಳೆಯಿಂದ ಆಗಿರುವ ನಷ್ಟದ ಸಮೀಕ್ಷೆಗೆ ವಿಶೇಷ ತಜ್ಞರ ತಂಡವನ್ನು ಕೊಡಗು ಜಿಲ್ಲೆಗೆ ಕಳುಹಿಸಿಕೊಡಬೇಕು. ಬೆಳೆಹಾನಿ ವೀಕ್ಷಿಸಿಸಲು ಆಗಮಿಸುವ ತಂಡ ಬೆಳೆಗಾರರನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕೆ ಹೊರತು ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳನ್ನು ಮಾತ್ರ ಸಂಪರ್ಕಿಸಬಾರದು. ಇಲ್ಲಿಯವರೆಗೆ ಬಂದ ತಂಡದಿಂದ ಬೆಳೆಗಾರರಿಗೆ ಯಾವುದೇ ಲಾಭವಾಗಿಲ್ಲವೆಂದು ಟೀಕಿಸಿದರು.
ವನ್ಯಜೀವಿಗಳ ದಾಳಿ ಹೆಚ್ಚಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಂಗಗಳ ಹಾವಳಿ ಮಿತಿ ಮೀರಿದೆ. ತೋಟದಲ್ಲಿರುವ ಯಾವುದೇ ಹಣ್ಣುಗಳು ಬೆಳೆಗಾರರಿಗೆ ಸಿಗುತ್ತಿಲ್ಲ. ಆದ್ದರಿಂದ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕಾಡು ಪ್ರಾಣಿಗಳ ಉಪಟಳವನ್ನು ನಿಯಂತ್ರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ಎ.ಜೀವಿಜಯ, ಐಎನ್‌ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್ ಹಾಗೂ ಪ್ರಮುಖರಾದ ಅಜ್ಜಳ್ಳಿ ರವಿ ಉಪಸ್ಥಿತರಿದ್ದರು.