ಕಲಬುರಗಿ: ಬೆಣ್ಣೆತೋರಾ ನೀರಾವರಿ ಯೋಜನೆಗೆ ಜಮೀನು ಪಡೆದು ರೈತರಿಗೆ ಪರಿಹಾರ ನೀಡದ ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್‌ನ (ಕೆಎನ್‌ಎನ್‌ಎಲ್) ಮುಖ್ಯ ಅಭಿಯಂತರರ ಕಲಬುರಗಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು (ಚರಾಸ್ತಿ) ಕೋರ್ಟ್ ಆದೇಶದಂತೆ ಶುಕ್ರವಾರ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿಕೊಂಡರು.
ಚಿತ್ತಾಪುರ ತಾಲೂಕಿನ ಹೇರೂರ (ಕೆ) ಗ್ರಾಮದ ಜಗದೇವಿ ಬಿರಾದಾರ ಅವರ ೧ ಎಕರೆ ೧೨ ಗುಂಟೆ ಜಮೀನನ್ನು ಬೆಣ್ಣೆತೋರಾ ನೀರಾವರಿ ಯೋಜನೆಗಾಗಿ ೨೦೦೯ರಲ್ಲಿ ಪಡೆಯಲಾಗಿತ್ತು. ಸತತ ಎಂಟು ವರ್ಷದ ಹೋರಾಟದ ಫಲವಾಗಿ ೨೦೧೭ರಲ್ಲಿ ಚಿತ್ತಾಪುರದ ಹಿರಿಯ ಸಿವಿಲ್ ನ್ಯಾಯಾಲಯವು ಪ್ರತಿ ಎಕರೆಗೆ ೩.೫೬ ಲಕ್ಷ ರೂ. ನೀಡುವಂತೆ ಆದೇಶಿಸಿತ್ತು. ಆದರೆ ನಿಗಮವೂ ರೈತರಿಗೆ ಪರಿಹಾರವೇ ನೀಡಿರಲಿಲ್ಲ.
ಇದುವರೆಗೆ ೧.೧೨ ಎಕರೆಯ ಜಮೀನಿಗೆ ಒಟ್ಟು ಎಲ್ಲ ಮೌಲ್ಯ ಸೇರಿ ೧೨.೪೮ ಲಕ್ಷ ರೂ. ನಿಗಮದಿಂದ ರೈತನಿಗೆ ಪರಿಹಾರವಾಗಿ ನೀಡಬೇಕು. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ನಿಗಮ ಸ್ಪಂದಿಸದಿದ್ದರಿAದ ರೈತ ಕೋರ್ಟ್ ಮೊರೆ ಹೋಗಿದ್ದರು.
ಪರಿಹಾರ ನೀಡುವಂತೆ ಕೆಎನ್‌ಎನ್‌ಎಲ್, ನಿಗಮದ ಮುಖ್ಯ ಅಧಿಕ್ಷಕ, ಗಂಡೋರಿ ನಾಲಾ ವಿಭಾಗದ ಇಇ, ಸಣ್ಣ ನೀರಾವರಿ ಇಲಾಖೆ ವಿಶೇಷ ಭೂಮಿ ಸ್ವಾಧೀನ ಅಧಿಕಾರಿ, ಕಲಬುರಗಿ ಜಿಲ್ಲಾಧಿಕಾರಿಯನ್ನು ವಿರುದ್ಧ ಜಿಲ್ಲಾ ಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಜಿಲ್ಲಾ ಮೂರನೇ ಹೆಚ್ಚುವರಿ ನ್ಯಾಯಾಲಯವೂ ೨೦೨೧ ಮಾರ್ಚ್ನಲ್ಲಿ `ಕೆಎನ್‌ಎನ್‌ಎಲ್ ರೈತನಿಗೆ ಪರಿಹಾರ ನೀಡುವಲ್ಲಿ ೨೭೪೦ ದಿನ (ಏಳುವರೆ ವರ್ಷ) ವಿಳಂಬ ಮಾಡಿದೆ. ನಿಗಮವೂ ಪ್ರಸ್ತುತ ಮಾರುಕಟ್ಟೆ ದರ ಮತ್ತು ಶಾಸನಬದ್ಧ ಪರಿಹಾರದಂತೆ ರೈತನಿಗೆ ೧೨.೪೮ ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿತ್ತು.
ಕೋರ್ಟ್ ಆದೇಶ ಪಾಲಿಸದ ನಿಗಮದ ವಿರುದ್ಧ ಪುನಃ ಕೋರ್ಟ್ ಮೊರೆ ಹೋಗಲಾಗಿತ್ತು. ೨೦೨೪ ಜೂ.೬ರಂದು ತೀರ್ಪು ನೀಡಿದ ಕೋರ್ಟ್ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಅಧಿಕ್ಷಕರ ಕಚೇರಿಯ ಚರಾಸ್ತಿಗಳನ್ನು ಜಪ್ತಿ ಮಾಡಿಕೊಳ್ಳುವಂತೆ ವಾರಂಟ್ ನೀಡಿತ್ತು. ಅದರಂತೆ ಶುಕ್ರವಾರ ಕೋರ್ಟ್ ಸಿಬ್ಬಂದಿ ಮತ್ತು ರೈತರ ಪರ ವಕೀಲರು ಕಚೇರಿಯಲ್ಲಿನ ಖುರ್ಚಿ, ಫ್ಯಾನ್, ಫರ್ನಿಚರ್‌ಗಳನ್ನು ಜಪ್ತಿ ಮಾಡಿಕೊಂಡು ಹೋದರು. ರೈತರ ಪರ ವಕೀಲರಾದ ಶಿವಕುಮಾರ ಮಾಲಿಪಾಟೀಲ್, ಭೀಮಾಶಂಕರ ಮಾಡಿಯಾಳ ವಾದ ಮಂಡಿಸಿದ್ದರು.