ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಗ್ರಂಥಾಲಯ ಚಳವಳಿ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಅವರ 132 ನೇ ಜನ್ಮ ದಿನಾಚರಣೆ ಸಂದರ್ಭದಲ್ಲಾದರೂ ತಮ್ಮ ಬವಣೆ ಬಗೆಹರಿದೀತೆ ಎಂಬ ನಿರೀಕ್ಷೆಯಲ್ಲಿ ಗ್ರಾಮೀಣ ಗ್ರಂಥಾಲಯ ಮೇಲ್ವಿಚಾರಕರಿದ್ದಾರೆ.
ರಂಗನಾಥನ್ ಜನ್ಮದಿನದ ಅಂಗವಾಗಿ ಆ.12 ರಂದು, ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಗ್ರಾಮೀಣ ಗ್ರಂಥಾಲಯಗಳ ಉಸ್ತುವಾರಿ ಹೊತ್ತಿರುವ ಗ್ರಾಮೀಣಾಭಿವೃದ್ಧಿ ಪಂ.ರಾಜ್ ಇಲಾಖೆ ಪ್ರತ್ಯೇಕವಾಗಿ ಗ್ರಂಥಪಾಲಕರ ದಿನವನ್ನು ಆಚರಿಸುತ್ತಿವೆ. ಆರ್‌ಡಿಪಿಆರ್‌ನಿಂದ ಅಂದು ಸಂಜೆ 4 ಗಂಟೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ತುಮಕೂರಲ್ಲಿ ಪ್ರತ್ಯೇಕವಾಗಿ ಗ್ರಂಥಪಾಲಕರ ದಿನ ಆಚರಿಸಲಾಗುತ್ತಿದೆ. ಇ ಸಂದರ್ಭದಲ್ಲಾದರೂ ಗ್ರಂಥಾಲಯ ಮೇಲ್ವಿಚಾರಕರ ಸಮಸ್ಯೆಗೆ ಸಿಎಂ ಪರಿಹಾರ ಸೂಚಿಸುವರೆ ಎಂದು ಕಾದು ನೋಡಬೇಕಿದೆ.
ರಾಜ್ಯದಲ್ಲಿರುವ 5895 ಮೇಲ್ವಿಚಾರಕರಿಗೆ ಕಳೆದ ಸೆಪ್ಟೆಂಬರ್ 1 ರಿಂದ ವೇತನವನ್ನು 12 ಸಾವಿರ ರೂ. ನಿಂದ 15196ಕ್ಕೆ ಹೆಚ್ಚಿಸಿ, ಕಾರ್ಮಿಕ ಇಲಾಖೆ ನಿಗದಿಪಡಿಸಿದ ತುಟ್ಟಿ ಭತ್ಯೆ ಪಾವತಿಸುವಂತೆ ಸರ್ಕಾರ ಆದೇಶಿಸಿತ್ತು. ಸರ್ಕಾರ ಸದ್ಯ ಸಿಬ್ಬಂದಿ ಖಾತೆಗೆ 12 ಸಾವಿರ ರೂ. ಜಮಾ ಮಾಡುತ್ತಿದೆ. ವ್ಯತ್ಯಾಸದ ಮೊತ್ತ 5924 ರೂ. ಗಳನ್ನು ಜಿಪಂದ ಲೈಬ್ರರಿ ಸೆಸ್‌ನಿಂದ ಬಿಡುಗಡೆ ಮಾಡಬೇಕಾಗಿದೆ. ಈ ಮೊತ್ತ ಬಿಡುಗಡೆಯಲ್ಲಿ ಕೆಲವೆಡೆ ವ್ಯತ್ಯಾಸವಾಗಿದ್ದು, ವೇತನ ಹೆಚ್ಚಿದ್ದರೂ ಸಕಾಲಕ್ಕೆ ದೊರಕುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆ 35 ವರ್ಷಗಳ ಹಿಂದೆ ಮಂಡಲ/ಗ್ರಾಪಂಗೆ ಒಂದು ಗ್ರಂಥಾಲಯವನ್ನು ಆರಂಭಿಸಿದ್ದು, ಸರ್ಕಾರ, ಮೇಲ್ವಿಚಾರಕರಿಗೆ ಮಾಸಿಕ ಗೌರವ ವೇತನ 300 ರೂ. ನಿಗದಿ ಪಡಿಸಿತ್ತು. ಕೆಲವು ವರ್ಷಗಳ ಬಳಿಕ ಇವುಗಳನ್ನು ಆರ್‌ಡಿಪಿಆರ್‌ಗೆ ಒಪ್ಪಿಸಿದ್ದ ಸರ್ಕಾರ ಮರಳಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಿತ್ತು. ಆದರೆ, ಸರ್ಕಾರ ಈಗ ಮತ್ತೆ ಈ ಗ್ರಂಥಾಲಯಗಳನ್ನು ಆರ್‌ಡಿಪಿಆರ್ ವ್ಯಾಪ್ತಿಗೆ ಒಪ್ಪಿಸಿದೆ.
ಅರಿವು ಕೇಂದ್ರಗಳಾಗಿ ಮೇಲ್ದರ್ಜೆಗೆ
ರಾಜ್ಯ ಸರ್ಕಾರ 2023 ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಗ್ರಾಮೀಣ ಗ್ರಂಥಾಲಯಗಳನ್ನು ಅರಿವು ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸುವುದಾಗಿ ಘೋಷಿಸಿತ್ತು. ಅದರಂತೆ ಇವು ಡಿಜಿಟಲ್, ಬೀ ಕನ್ ಗ್ರಂಥಾಲಯಗಳಾಗಿ ಪರಿವರ್ತನೆಯಾಗುತ್ತಿವೆ. 5895 ಗ್ರಂಥಾಲಯಗಳ ಪೈಕಿ ಜುಲೈ 29 ಕ್ಕೆ ಅಂತ್ಯಗೊಂಡಂತೆ 5691 ಡಿಜಿಟಲ್ ಹಾಗೂ 814 ಬೀ ಕನ್ ಗ್ರಂಥಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಈ ಕೇಂದ್ರಗಳಲ್ಲಿ 4857351 ಮಕ್ಕಳು ನೋಂದಾಯಿಸಿಕೊಂಡಿದ್ದಾರೆ.