ಜಿಲ್ಲೆ

ಪರಿಹಾರ ಕಾರ್ಯ ವಿಳಂಬ, ಸರ್ಕಾರದ ನಡೆಗೆ ಸಿದ್ದರಾಮಯ್ಯ ಬೇಸರ, ಸಮಗ್ರ ಸಮೀಕ್ಷೆಗೆ ಅಧಿಕಾರಿಗಳಿಗೆ ಸೂಚನೆ

Bengaluru Rural

ಹೊಸಕೋಟೆ: ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾಳಾಗಿದ್ದರೂ ಅಧಿಕಾರಿಗಳು ಸಮರೋಪಾದಿಯಲ್ಲಿ ಸರ್ವೇ ನಡೆಸದೆ ಬೇಜಾವ್ದಾರಿ ತೋರಿದ್ದಾರೆ. ಸರ್ಕಾರವೂ ರೈತರ ಸಂಕಷ್ಟಕ್ಕೆ ಸೂಕ್ತ ರೀತಿ ಸ್ಪಂದಿಸುತ್ತಿಲ್ಲ ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ತಾಲೂಕಿನ ತಾವರೆಕೆರೆಯ ರೈತರ ತೋಟಗಳಿಗೆ ಬುಧವಾರ ಭೇಟಿ ನೀಡಿ ಮಳೆಯಿಂದಾಗಿ ಹಾನಿಗೊಳಗಾದ ಬೆಳೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.

ರೈತರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಕಾಲಿಕ ಮಳೆಗೆ ಬೆಳೆ ನಾಶವಾಗಿದ್ದು, ಅನ್ನದಾತರ ಸ್ಥಿತಿ ಹೇಳತೀರದಾಗಿದೆ. ಸರ್ಕಾರ ಅಧಿಕಾರಿಗಳಿಂದ ಬೆಳೆ ಸಮೀಕ್ಷೆ ಮಾಹಿತಿ ಪಡೆದು ಸೂಕ್ತ ಪರಿಹಾರ ದೊರಕಿಸಬೇಕಿತ್ತು. ಆದರೆ ನೀತಿ ಸಂಹಿತೆಯ ಕುಂಟು ನೆಪ ಹೇಳಿಕೊಂಡು ಬೇಜವಾಬ್ದಾರಿ ತೋರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಳೆಯಿಂದಾಗಿ ಹಾನಿಗೊಳಗಾಗಿ ಮನೆ ಕಳೆದುಕೊಂಡವರಿಗೆ ಹಾಗೂ ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ಈ ಕೂಡಲೇ ಪರಿಹಾರ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳೂ ಸರಿಯಾದ ರೀತಿಯಲ್ಲಿ ಬೆಳೆ ಸಮೀಕ್ಷೆ ಹಾಗೂ ಮನೆ ಹಾನಿ, ಮಳೆಯಿಂದಾದ ಅನಾಹುತಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ತಾಲೂಕಿನಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳನ್ನು ಪರಿಶೀಲನೆ ನಡೆಸಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದ್ದು, ಒಂದು ಗ್ರಾಮದಲ್ಲಿ ಶಾಸಕರ ಅನುದಾನದಡಿಯಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಸಹ ಭರವಸೆ ನೀಡಿದ್ದೇನೆ ಎಂದರು.

ರೈತರು ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ಅನ್ನದಾತರ ಬಗ್ಗೆ ಕಾಳಜಿ ಇದ್ದಲ್ಲಿ ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸಬೇಕು. ಪರಿಹಾರ ವಿತರಣೆಯಲ್ಲಿ ಯಾವುದೇ ರಾಜಕೀಯ ನುಸುಳಬಾರದು. ಇಂತಹ ಸಂಕಷ್ಟದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ತಿಳಿಸಿದರು.

ರೈತರ ಅಳಲು: ಹೊಸಕೋಟೆ ಮೂಲಕ ಕೋಲಾರ ಭಾಗಕ್ಕೆ ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಸಕೋಟೆಯಲ್ಲಿ ಸ್ವಾಗತಿಸಿದ ಶಾಸಕ ಶರತ್ ಬಚ್ಚೇಗೌಡ, ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಹಾನಿಗೀಡಾದ ಬೆಳೆ, ಮನೆಗಳ ಪ್ರದೇಶಕ್ಕೆ ಖುದ್ದು ಕರೆದೊಯ್ದು ಪರಿಸ್ಥಿತಿ ವಿವರಿಸಿದರು. ಮಳೆಯಿಂದಾಗಿ ಅನೇಕ ಅನಾಹುತ ಸಂಭವಿಸಿದ್ದು, ಯಾರಿಗೂ ಸಹ ಸೂಕ್ತ ಪರಿಹಾರ ದೊರೆತಿಲ್ಲ ಹಾಗೂ ನಮ್ಮ ಸಮಸ್ಯೆ ಆಲಿಸುವವರು ಇಲ್ಲ ಎಂದು ರೈತರು ಸಿದರಾಮಯ್ಯ ಬಳಿ ಅಲವತ್ತುಕೊಂಡದರು.