ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮದಲ್ಲಿ ಸಿಡಿಲು ಬಡಿದು ಇತ್ತೀಚೆಗೆ ಮೃತಪಟ್ಟ ರೈತ ಲೋಕೇಶ್ ಅವರ ಮನೆಗೆ ತಹಸೀಲ್ದಾರ್ ಕುಂಇ ಅಹಮದ್ ಸೋಮವಾರ ಸಂಜೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಜತೆಗೆ ಪರಿಹಾರ ಆದೇಶ ಪತ್ರ ವಿತರಿಸಿದರು.
ರೈತ ಲೋಕೇಶ್ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದರು. ಪೊಲೀಸರು, ವೈದ್ಯರ ವರದಿ ಅನುಸಾರ ಪರಿಹಾರ ಕಲ್ಪಿಸಬೇಕಿದ್ದರಿಂದ ಸ್ವಲ್ಪ ತಡವಾಗಿ ಮೃತ ಲೋಕೇಶ್ ಅವರ ಪತ್ನಿ ಮೀನಾಕ್ಷಿ ಅವರಿಗೆ ಪರಿಹಾರ ಆದೇಶವನ್ನು ಹಸ್ತಾಂತರಿಸಲಾಗಿದೆ. ಈಗಾಗಲೇ ಆನ್‌ಲೈನ್ ಮುಖಾಂತರ 5 ಲಕ್ಷ ರೂ. ಅವರ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಎಂದು ತಹಸೀಲ್ದಾರ್ ತಿಳಿಸಿದರು.
ಉಪತಹಸೀಲ್ದಾರ್ ಮಹೇಶ್, ಆರ್‌ಐ ಪ್ರದೀಪ್, ಗ್ರಾಮ ಲೆಕ್ಕಾಧಿಕಾರಿ ಸುನೀಲ್, ನೌಕರ ರಾಜು, ಗ್ರಾಮಸ್ಥರಾದ ಎ.ಎಸ್. ಚಂದ್ರಶೇಖರ್, ಧರ್ಮ, ಶಿವರುದ್ರ ನಾಯಕ ಹಾಜರಿದ್ದರು.