ಜಿಲ್ಲೆ

'ಪರಿಸರವೂ ದೇಶದ ರಕ್ಷಣೆ ಆಗಿದೆ, ವಿದ್ಯಾರ್ಥಿಗಳು ಪರಿಸರ ಸಂರಕ್ಷಿಸಿ'

ಮೈಸೂರು: ಪರಿಸರ ಸಂರಕ್ಷಣೆಯೂ ದೇಶದ ರಕ್ಷಣೆಯೇ ಆಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರ ಪ್ರೀತಿಸುವುದರ ಜತೆಗೆ ರಕ್ಷಣೆ ಮಾಡಬೇಕು ಎಂದು ಮೈಸೂರು ತಾಲೂಕು ನಾಗವಾಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಾ.ಶೋಭಾರಾಣಿ ಸಲಹೆ ನೀಡಿದರು.
ರಾಮಕೃಷ್ಣನಗರದಲ್ಲಿರುವ ವಿಶ್ವಮಾನವ ವಿದ್ಯಾನಿಕೇತನ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಹಿರಿಯರ ತ್ಯಾಗ, ಬಲಿದಾನ, ಹೋರಾಟದಿಂದ ನಮಗೆ ಸ್ವಾತಂತ್ರೃ ಬಂದಿದೆ. ಆ ಸ್ವಾತಂತ್ರ್ಯವನ್ನು ನಾವು ಅನುಭವಿಸಿ ಸಂಭ್ರಮಿಸುತ್ತಿದ್ದೇವೆ. ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಆದರೆ ಪರಿಸರ ಸಂರಕ್ಷಿಸಬೇಕಾದ ಜವಾಬ್ದಾರಿ ಈಗ ನಮ್ಮೆಲ್ಲರ ಮೇಲಿದೆ ಎಂದರು.
ಮೈಸೂರಿನಲ್ಲಿ ಈಗ ‘ಇರುವುದೊಂದೇ ಭೂಮಿ, ಅದನ್ನು ಉಳಿಸಿಕೊಳ್ಳೋಣ ಸ್ವಾಮಿ’ ಎಂಬ ಅಭಿಯಾನ ನಡೆಯುತ್ತಿದೆ. ಮನುಷ್ಯನಿಗೆ ಎಲ್ಲವೂ ಸಿಗುತ್ತಿದೆ. ಆದರೂ ಮರ ಗಿಡಗಳನ್ನು ಕಡಿಯುತ್ತಿದ್ದೇವೆ, ಇದು ನಿಲ್ಲಬೇಕು. ಭವಿಷ್ಯದ ಆಶಾಕಿರಣಗಳಾದ ವಿದ್ಯಾರ್ಥಿಗಳು ಎಲ್ಲಿ ಸಾಧ್ಯವೋ ಅಲ್ಲಿ ಗಿಡಗಳನ್ನು ನೆಡಬೇಕು. ನೀರಿನ ಸಂರಕ್ಷಣೆ ಮಾಡಿ, ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ, ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕೆಂದು ಮನವಿ ಮಾಡಿದರು.
ಹಿರಿಯ ಕೆಎಎಸ್ ಅಧಿಕಾರಿ ಎಂ.ಕೆ.ಸವಿತಾ ಅವರ ಸಹಕಾರದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನರ್ಸರಿ ಮಕ್ಕಳು ವಿವಿಧ ವಷೇಭೂಷಣಗಳನ್ನು ತೊಟ್ಟು ಪ್ರದರ್ಶನ ನೀಡಿದರು.
ಸಂಸ್ಥೆಯ ಅಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರೇಗೌಡ, ಆಡಳಿತಾಧಿಕಾರಿ ಪ್ರೊ.ದಿವಾಕರ್, ವಿದ್ವಾನ್ ಶ್ರೀನಿವಾಸಮೂರ್ತಿ, ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ, ಶಿಕ್ಷಕರಾದ ವಾಣಿ, ಜ್ಞಾನವಿ, ಚಂದ್ರು ಇತರರಿದ್ದರು.