ರಾಮದುರ್ಗ: ಕಳಸಾ ಮತ್ತು ಬಂಡೂರಿ ನಾಲಾಗಳನ್ನು ಮಲಪ್ರಭಾ ನದಿಗೆ ಜೋಡಿಸಬೇಕೆನ್ನುವ ಉತ್ತರ ಕರ್ನಾಟಕದ ರೈತರ 60 ವರ್ಷಗಳ ಹೋರಾಟಕ್ಕೆ ಕೆಲ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಅಂಥವರನ್ನು ಸರ್ಕಾರ ಗೋವಾ ರಾಜ್ಯಕ್ಕೆ ಗಡಿಪಾರು ಮಾಡಬೇಕು ಎಂದು ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಆಗ್ರಹಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಳಸಾ ಬಂಡೂರಿ ಜಾರಿಗೆ ಮತ್ತೊಂದು ನರಗುಂದ ಬಂಡಾಯ ಮರುಕಳಿಸ ದಂತೆ ಸರ್ಕಾರ ಮುನ್ನೆಚ್ಚ್ಚರಿಕೆ ವಹಿಸ ಬೇಕು. ಕಾಮಗಾರಿ ವಿರೋಧಿಸುವವರು ರಾಜ್ಯದಲ್ಲಿರಲು ಯೋಗ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೀಘ್ರ ರಾಮದುರ್ಗ ಬಂದ್: ಕಳಸಾ ಮತ್ತು ಬಂಡೂರಿ ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ಮುಖಂಡ ಮಲ್ಲಣ್ಣ ಯಾದವಾಡ ನೇತೃತ್ವದಲ್ಲಿ ರಾಮದುರ್ಗ ಬಂದ್ ಮಾಡುವ ಮೂಲಕ ಹೋರಾಟಕ್ಕೆ ನಾಂದಿ ಹಾಡಲಾಗುವುದು ಎಂದು ಅವರು ತಿಳಿಸಿದರು.
ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಮಹದಾಯಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಪರಿಸರವಾದಿಗಳಿಗೆ ನಿಜವಾದ ಕಾಳಜಿ ಇಲ್ಲ. ಆರು ದಶಕಗಳಿಂದ ನಿರಂತರ ಹೋರಾಟ ಮಾಡುತ್ತಿರುವ ಹೋರಾಟಗಾರರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿರುವುದು ದುರಂತ ಎಂದರು. ಮುಖಂಡ ಬಸವರಾಜ ಕೋನನ್ನವರ ಇತರರಿದ್ದರು.