ಕೂಡ್ಲಿಗಿ: ಬ್ರಿಟಿಷರನ್ನು ದೇಶದಿಂದ ಹೊರದೂಡುವಲ್ಲಿ ಗಣೇಶನ ಪಾತ್ರ ಇದ್ದು, ಗಣೇಶೋತ್ಸವವನ್ನು ಶಿಸ್ತು, ಶ್ರದ್ಧೆಯಿಂದ ಆಚರಿಸೋಣ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಧಾರ್ಮಿಕ ಸಭೆ, ಸಮಾರಂಭಗಳ ಜತೆ ನಮಗೆ ಪರಿಸರ ಪ್ರಜ್ಞೆಯೂ ಮುಖ್ಯವಾಗಿದ್ದು, ಗಣೇಶೋತ್ಸವ ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ನಗರವನ್ನು ಸ್ವಚ್ಛ, ಸುಂದರವನ್ನಾಗಿಸಲು ಪಣ ತೊಡೋಣ ಎಂದು ಸಲಹೆ ನೀಡಿದರು.
ಹಬ್ಬದ ನೆಪದಲ್ಲಿ ಪರಿಸರಕ್ಕೆ ಮಾರಕವಾದ ಪಟಾಕಿ ಹೊಡೆಯುವುದು ತಪ್ಪು. ಮಣ್ಣಿನ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಗಣಪತಿಗೆ ಪರಿಸರಕ್ಕೆ ಪೂರಕವಾದ ಬಣ್ಣ ಹಚ್ಚಬೇಕು. ಇದರಿಂದ ವಿಸರ್ಜನೆ ಸಂದರ್ಭದಲ್ಲಿ ಗಣೇಶ ಮೂರ್ತಿ ಸುಲಭವಾಗಿ ನೀರಿನಲ್ಲಿ ಕರಗುತ್ತದೆ. ಭಕ್ತಿಯಿಂದ ಮೆರವಣಿಗೆ ನಡೆಸಿ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಬೇಕು ಎಂದು ಕೋರಿದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಪಟ್ಟಣದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣಪತಿ ಮೂರ್ತಿಗಳ ದರ್ಶನ ಮಾಡಿದರು. ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಪ್ರಮುಖರಾದ ಎಂ.ಗುರುಸಿದ್ದನ ಗೌಡ, ಸುರೇಶ್ ಜನ್ನು, ಉದಯ ಜನ್ನು, ಸಿ.ಬಿ.ಜಯರಾಂ ನಾಯಕ, ಢಾಣಿ ರಾಘವೇಂದ್ರ, ಗುನ್ನಳ್ಳಿ ರಾಘವೇಂದ್ರ, ಬಿ.ಭೀಮೇಶ್, ಎಚ್.ರಾಜಶೇಖರ, ಕುಮಾರಸ್ವಾಮಿ, ಎನ್.ದುರುಗೇಶ್, ಎನ್.ಗಂಗಾಧರ ಇತರರಿದ್ದರು.