ಎನ್.ಆರ್.ಪುರ: ಪರಿಸರದಿಂದಲೇ ಬದುಕುತ್ತಿರುವ ನಾವು ಪರಿಸರಕ್ಕೆ ಏನು ಕೊಡುಗೆ ನೀಡುತ್ತಿದ್ದೇವೆ ಎಂದು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ಎಂದು ನಾಗಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ಬೆನ್ನಿ ಹೇಳಿದರು.
ಬಸ್ತಿಮಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಾಮಾಜಿಕ ಅರಣ್ಯ ವಲಯದ ನೇತೃತ್ವದಲ್ಲಿ ಗಿಡ ನೆಡವು ಕಾರ್ಯಕ್ರಮದಲ್ಲಿ ಮಾತನಾಡಿ, ನೆಟ್ಟ ಗಿಡವನ್ನು ಪೋಷಿಸಿ ಬೆಳೆಸಿದರೆ ಮಾತ್ರ ಪರಿಸರ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.
ತಾಪಂ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ್ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿ ದಿನ ಪರಿಸರದಲ್ಲೇ ಕೆಲಸ ಮಾಡುತ್ತ ನಿತ್ಯವೂ ಪರಿಸರ ದಿನ ಆಚರಣೆ ಮಾಡುತ್ತಾರೆ. ನಾವು ನೆಡುವ ಒಂದೊಂದು ಗಿಡವೂ ಮುಂದೆ ನಮಗೆ ಫಲ ನೀಡುತ್ತವೆ. ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಬೇಕಾಗಿರುವುದರಿಂದ ಶಾಲೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹೆಚ್ಚು ಅರ್ಥಪೂರ್ಣವಾಗಿದೆ ಎಂದರು.
ಸಾಮಾಜಿಕ ವಲಯ ಉಪ ಅರಣ್ಯಾಧಿಕಾರಿ ವರುಣ ಸಿ.ಶೆಟ್ಟಿ ಮಾತನಾಡಿ, ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡಬೇಕು ಎಂದು ಕರೆ ನೀಡಿದ್ದಾರೆ. ಅದರಂತೆ ಪ್ರತಿಯೊಬ್ಬರೂ ಒಂದು ಗಿಡ ನೆಟ್ಟು ಪೋಷಿಸಬೇಕು ಎಂದು ತಿಳಿಸಿದರು. ಬಸ್ತಿಮಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ನೇತ್ರಾವತಿ ಹಾಗೂ ಶಿಕ್ಷಕರು ಇದ್ದರು.