ಜಿಲ್ಲೆ

ಪರಿಸರ ಸ್ನೇಹಿ ಹಬ್ಬಗಳ ಆಚರಣೆಗೆ ಆದ್ಯತೆ ನೀಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಬ್ಬ ಹರಿದಿನಗಳ ಸಂಪ್ರದಾಯ ಮೂಲಕ ಸಂಸ್ಕೃತಿ ಹಾಗೂ ಪರಿಸರ ರಕ್ಷಣೆ ಆಗಬೇಕೆ ಹೊರತು ಪರಿಸರ ಹಾನಿ ಆಗಬಾರದು ಎಂದು ಸಾಹಿತಿ ಕೆ.ಎಚ್. ನಾಯಕ ಹೇಳಿದರು.
ನಗರದ ಹು-ಧಾ ನಾಗರಿಕ ಪರಿಸರ ಸಮಿತಿ ಹಾಗೂ ಸರ್ಕಾರಿ ಪ್ರೌಢ ಶಾಲೆ ವತಿಯಿಂದ ಶಾಲೆ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪರಿಸರ ಮಿತ್ರ ಗಣೇಶ ಹಬ್ಬ ಆಚರಿಸುವ ಜಾಗೃತ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಬ್ಬಗಳು ಬಂಧು-ಬಳಗ ಎಲ್ಲ ಒಂದಡೆ ಸೇರಿ ಸಂತಸ ಪಡುವ ವ್ಯವಸ್ಥೆ. ಆದರೆ ಇಂದು ಹಬ್ಬಗಳು ಮತ್ತೊಬ್ಬರಿಗೆ ತೊಂದರೆ ಕೊಡುವ ಮತ್ತು ಪರಿಸರಕ್ಕೆ ಹಾನಿ ಮಾಡುವ ರೀತಿಯಲ್ಲಿ ಆಚರಿಸಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ, ಪಟಾಕ್ಷಿ ಸುಡುವುದು, ಡಿ.ಜೆ. ಅಬ್ಬರದಿಂದ ಶಬ್ದ ಮಾಲಿನ್ಯ ಮಾಡುವುದು ಹಬ್ಬಗಳ ಉದ್ದೇಶ ಅಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿ, ಪರಿಸರ ಕಾಳಜಿ ಮಾಡುವುದು ಸಾಮೂಹಿಕ ಪ್ರಯತ್ನ ಆಗಬೇಕು. ಪಿಒಪಿ ಗಣೇಶ ಮೂರ್ತಿ ಬಳಸದೆ ಮಣ್ಣಿನ ಮೂರ್ತಿಗಳ ಪೂಜೆ ಮಾಡಬೇಕು ಎಂದರು.
ಕೆ.ಜಿ. ದೇವರಮನಿ, ಪ್ರಾಚಾರ್ಯೆ ಶ್ರೀದೇವಿ ಲದ್ದಿಮಠ ಮಾತನಾಡಿದರು.ಪರಿಸರ ಸ್ನೇಹಿ ಗಣಪತಿ ಸ್ಥಾಪಿಸುವ ಮತ್ತು ಪಟಾಕ್ಷಿ ಮುಕ್ತ ಹಬ್ಬ ಆಚರಿಸುವ ಕುರಿತು ಮಕ್ಕಳು ಪ್ರತಿಜ್ಞೆ ಸ್ವೀಕರಿಸಿದರು.
ಸುರೇಶ ಚಿಕ್ಕಣ್ಣವರ, ಅರ್ಜುನ ಲಮಾಣಿ, ಬಿ.ಜಿ. ಬಶೆಟ್ಟಿ, ಸುಜಾತಾ, ಮಾಧುರಿ ಕುಲಕರ್ಣಿ, ಕಮಲಾ ಸಾಲಿಮಠ, ಇತರರು ಇದ್ದರು. ರಮೇಶ ತಲವಾರ ಸ್ವಾಗತಿಸಿದರು. ಡಾ. ವಿಲಾಸ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.