ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿ ಹಬ್ಬಕ್ಕೂ ಇರುವ ಸಾಮಾಜಿಕ ಮೌಲ್ಯವನ್ನು ಈಡೇರಿಸಲು ಹಬ್ಬವನ್ನು ಆಚರಿಸಬೇಕು. ಹಬ್ಬದ ಆಚರಣೆಯಿಂದ ನಾವು ಸಂತಸ ಪಡುವುದರ ಜತೆಗೆ ಇನ್ನೊಬ್ಬರಿಗೂ ಸಂತೋಷವಾಗುವಂತೆ ನೋಡಿಕೊಳ್ಳಬೇಕೆ ಹೊರತು ಪರಿಸರಕ್ಕೆ ಹಾನಿ ಉಂಟು ಮಾಡಬಾರದು ಎಂದು ಶಹರ ಕ್ಷೇತ್ರ ಸಮನ್ವಯ ಅಧಿಕಾರಿ ಮಂಜುನಾಥ ಅಡಿವೇರ ಹೇಳಿದರು.
ಹು-ಧಾ ನಾಗರಿಕ ಪರಿಸರ ಸಮಿತಿ ಹಾಗೂ ಓಂ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪರಿಸರ ಸ್ನೇಹಿ ಗಣೇಶ ಹಬ್ಬದ ಕುರಿತು ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಕೆ.ಎಚ್. ನಾಯಕ, ಪ್ರತಿ ಹಬ್ಬಕ್ಕೂ ನಮ್ಮ ಹಿರಿಯರು ಒಂದು ನಿರ್ದಿಷ್ಟ ಸದುದ್ದೇಶ ಇಟ್ಟುಕೊಂಡು ಆಚರಿಸುತ್ತಾ ಬಂದಿದ್ದಾರೆ. ಆದರೆ ಇಂದಿನ ಬುದ್ಧಿವಂತರಾದ ನಾವು ಅವುಗಳಲ್ಲಿ ನಂಬಿಕೆ ಮತ್ತು ಮೂಢನಂಬಿಕೆ ವ್ಯತ್ಯಾಸ ತಿಳಿಯದೆ ವಿಜೃಂಭಣೆಗೆ ಆದ್ಯತೆ ನೀಡಿ ಪರಿಸರಕ್ಕೆ ಹಾನಿ ಮಾಡುವ ರೀತಿ ನಮ್ಮ ಶ್ರೀಮಂತಿಕೆ ವೈಭವೀಕರಿಸುತ್ತೇವೆ. ಇದರಿಂದ ಭವಿಷ್ಯದಲ್ಲಿ ಅತ್ಯಂತ ಕಷ್ಟಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿ, ಮಕ್ಕಳ ಮನಸ್ಸಿನಲ್ಲಿ ಪರಿಸರ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ಶಾಲಾ ಹಂತದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಭವಿಷ್ಯದಲ್ಲಿ ಮಕ್ಕಳಿಂದಲೇ ಪರಿಸರ ರಕ್ಷಣೆ ಆಗುವ ಭರವಸೆ ಇದೆ ಎಂದರು.
ಸಂಸ್ಥೆ ಅಧ್ಯಕ್ಷ ಬಸವರಾಜ ಯಗತಿಮಠ, ಬಸವರಾಜ ಕಪಲಿ, ಐ.ಎಲ್.ಪಾಟೀಲ, ಇತರರು ಇದ್ದರು. ಸಂತೋಷ ಕುರಬೆಟ್ ಸ್ವಾಗತಿಸಿದರು. ಸಂಗೀತ ಒಡೆಯರ ನಿರೂಪಿಸಿದರು.