ಜಿಲ್ಲೆ

ಪರಿಸರ ಸ್ನೇಹಿ ದೀಪಾವಳಿ ಆಚರಿಸಿ

ಚಿಕ್ಕಬಳ್ಳಾಪುರ : ಪರಿಸರಕ್ಕೆ ಮಾರಕವಾದ ಪಟಾಕಿಗಳನ್ನು ಸಿಡಿಸದೆ ದೀಪ ಹಚ್ಚಿ, ದೀಪಾವಳಿ ಆಚರಿಸುವುದರ ಬಗ್ಗೆ ಸ್ವಭಿಷ್ಟಿ ತಂಡದ ನೇತೃತ್ವದಲ್ಲಿ ಪ್ರಗತಿಪರ ವಿವಿಧ ಸಂಘಟನೆಗಳು ಶನಿವಾರ ಸೈಕಲ್ ಜಾಥಾ ನಡೆಸಿದವು.

ನಗರದ ಮರಳು ಸಿದ್ದೇಶ್ವರ ವೃತ್ತದಲ್ಲಿ ಸೈಕಲ್ ಜಾಥಾಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಚಾಲನೆ ನೀಡಿದರು.ಕತ್ತಲದಿಂದ ಬೆಳಕಿನಡೆಗೆ ಸಾಗುವ, ದುಷ್ಟ ಆಲೋಚನೆ ಬಿಟ್ಟು ಒಳ್ಳೆಯ ಮಾರ್ಗದಲ್ಲಿ ನಡೆಯುವ ಸಂಕೇತವಾದ ದೀಪವಾಳಿ ಆಚರಣೆಯಿಂದ ಪರಿಸರಕ್ಕೆ ತೊಂದರೆಯಾಗಬಾರದು ಎಂದು ಅಭಿಪ್ರಾಯಪಟ್ಟರು.

ಮಾರಕ ಪಟಾಕಿಗಳನ್ನು ಸಿಡಿಸುವುದರಿಂದ ಪರಿಸರ ಹಾಳಾಗುತ್ತದೆ. ಜತೆಗೆ ಹಿರಿಯರು ಮತ್ತು ಮಕ್ಕಳು, ಮೂಕ ಜೀವಿಗಳು ಬೆದರಿ, ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು. ಹಬ್ಬದ ಆಚರಣೆ ಸಂದರ್ಭದಲ್ಲಿ ಹಲವರು ಪಟಾಕಿ ಸಿಡಿಸಿ, ಕಣ್ಣು, ಕೈ ಕಾಲು ಸುಟ್ಟುಕೊಂಡು ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ನಡೆಯುತ್ತಿವೆ. ಆದರೂ ನಾವೂ ಎಚ್ಚೆತ್ತುಕೊಳ್ಳದಿರುವುದು ದುರದೃಷ್ಟ ಎಂದು ವಿಷಾದಿಸಿದರು.

ಕರೊನಾ ಸೋಂಕು ಪ್ರಕರಣವು ವ್ಯಾಪಕವಾಗಿ ಹರಡುತ್ತಿದೆ. ಇದೇ ವೇಳೆ ಪಟಾಕಿ ಹೊಗೆಯಿಂದ ಕೆಮ್ಮು, ಅಲರ್ಜಿ, ಶ್ವಾಸಕೋಶ ಸಮಸ್ಯೆ, ಹೃದ್ರೋಗ ಸೇರಿ ಹಲವು ಸಮಸ್ಯೆಗಳು ಹೆಚ್ಚಾಗುತ್ತದೆ ಎಂಬ ವರದಿಯನ್ನು ತಜ್ಞರು ನೀಡಿದ್ದು ಹಬ್ಬಕ್ಕೆ ಪಟಾಕಿ ಬಿಟ್ಟು ದೀಪ ಹಚ್ಚಿ ಸಂಭ್ರಮಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸೈಕಲ್ ಜಾಥಾ ಕೈಗೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಭಿಷ್ಟಿ ತಂಡದ ಸಂಚಾಲಕಿ ನರ್ಮದಾರೆಡ್ಡಿ ಮಾತನಾಡಿ, ಪ್ರತಿ ವರ್ಷ ಪರಿಸರಕ್ಕೆ ಮಾರಕವಾದ ಪಟಾಕಿ ವಿರುದ್ಧ ಜಾಗೃತಿ ಮೂಡಿಸುತ್ತಿದ್ದರೂ ಬಳಕೆ ಮಾತ್ರ ನಿರೀಕ್ಷೆಗೆ ಅನುಗುಣವಾಗಿ ಕಡಿಮೆಯಾಗುತ್ತಿಲ್ಲ. ಮುಂಬರುವ ದಿನಗಳಲ್ಲಾದರೂ ಸಂಪೂರ್ಣವಾಗಿ ಕಡಿವಾಣ ಹಾಕಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.ಸರ್ ಎಂ.ವಿ.ಕಾರ್ಮಿಕರ ಸೇವಾ ಸಂಘ ಜಿಲ್ಲಾಧ್ಯಕ್ಷ ಪ್ರಕಾಶ್, ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಜಿ.ಚಂದ್ರಶೇಖರ್, ಮುಖಂಡರಾದ ಸ್ನೇಕ್ ಪೃಥ್ವಿ, ಗುಂಪು ಮರದ ಆನಂದ್, ಕುಂಬಿ ನರಸಿಂಹಮೂರ್ತಿ ಮತ್ತಿತರರು ಇದ್ದರು.

ಪ್ರಮುಖ ರಸ್ತೆಗಳಲ್ಲಿ ಜಾಥಾ : ನಗರದ ಮರಳು ಸಿದ್ದೇಶ್ವರ ವೃತ್ತದಿಂದ ಎಂ.ಜಿ.ರಸ್ತೆ ಮಾರ್ಗವಾಗಿ ಶಿಡ್ಲಘಟ್ಟ ವೃತ್ತ, ಬಲುಮುರಿ ವೃತ್ತ, ಭುವನೇಶ್ವರಿ ವೃತ್ತದ ಮೂಲಕ ಎಪಿಎಂಸಿ ಮಾರುಕಟ್ಟೆಯವರೆಗೂ ವಿದ್ಯಾರ್ಥಿಗಳು, ಪರಿಸರಪ್ರೇಮಿಗಳು, ಹೋರಾಟಗಾರರು, ವಿವಿಧ ಸಂಘಟನೆಗಳ ಮುಖಂಡರು ಸೈಕಲ್ ಜಾಥಾದಲ್ಲಿ ಸಾಗಿದರು. ಪಟಾಕಿ ವಿರುದ್ಧ ಘೋಷಣೆ ಕೂಗಿ ಪರಿಸರ ಸ್ನೇಹಿ ದೀಪಾವಳಿಯ ಹಬ್ಬ ಆಚರಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.