ಕಲಬುರಗಿ: ಪ್ರತಿ ವರ್ಷದಂತೆ ಈ ಬಾರಿ ಸೆಪ್ಟೆಂಬರ್ 18 ರಂದು ಸಂಭ್ರಮ ಸಡಗರದಿಂದ ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಭಕ್ತಿ ಭಾವ, ಸಂಪ್ರದಾಯಕ್ಕೆ ಚ್ಯುತಿ ಆಗದಂತೆ ಪರಿಸರ ಸ್ನೇಹಿ ಮಣ್ಣಿನ ಗೌರಿ ಗಣಪತಿ ತಂದು ಪೂಜಿಸಿ ಹಬ್ಬ ಆಚರಿಸೋಣ ಎಂದು ಕರವೇ(ಪ್ರವೀಣ ಶೆಟ್ಟಿ) ಬಣದ ಕಲಬುರಗಿ ತಾಲೂಕು ಅಧ್ಯಕ್ಷ ವಿಜಯಕುಮಾರ ಅಂಕಲಗಿ ಕರೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆಯ ಮೂಲಕ ಮನವಿ ಮಾಡಿದ್ದು, ನಮ್ಮ ಆಚರಣೆಯಿಂದ ಜಲ,ನೆಲ,ಗಾಳಿ ಮತ್ತು ಪರಿಸರಕ್ಕೆ ಹಾನಿ ಆಗದಂತೆ ಎಚ್ಚರಿಕೆ ವಹಿಸೋಣ.ಪ್ಲ್ಯಾಸ್ಟರ್ ಆಪ್ ಪ್ಯಾರಿಸ್(ಪಿಓಪಿ) ಗಣೇಶ ವಿಗ್ರಹಗಳನ್ನ ನಾವು ನೀವೆಲ್ಲರೂ ಸ್ವಯಂ ಪ್ರೇರಿತವಾಗಿ ತಿರಸ್ಕರಿಸಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಯನ್ನು ಕಡ್ಡಾಯವಾಗಿ ಬಳಸಬೇಕು. ಏಕೆಂದರೆ ಪಿಒಪಿ ಗಣೇಶ ಮೂರ್ತಿ ವಿಸರ್ಜನೆ ಮಾಡುವುದರಿಂದ ಕೆರೆಗಳು, ನದಿಗಳು ಮತ್ತು ಸಮುದ್ರದ ನೀರು ವಿಷಪೂರಿತವಾಗಿ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ. ಈ ವರ್ಷ ಮರು ಬಳಕೆಯ ಕಾಗದ, ನೈಸರ್ಗಿಕ ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶ ಹಾಗೂ ಇತರ ನೈಸರ್ಗಿಕವಾಗಿ ಹಬ್ಬ ಆಚರಿಸಿ,ಈ ವರ್ಷ ಒಂದು ಬದಲಾವಣೆ ಆಗಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೌರಿ ಮತ್ತು ಗಣೇಶನ ಹಬ್ಬದ ವೇಳೆ ಮಾವಿನ ತೋರಣ ಕಟ್ಟಿ,ತೆಂಗಿನ ಗರಿಯಿಂದ ಮಂಟಪ ಮಾಡಿ,ಬಾಳೆ ಕಂದು ಕಟ್ಟಿ ಮಣ್ಣಿನ ಗೌರಿ, ಗಣಪತಿ ಮೂರ್ತಿಗಳನ್ನು ತಂದು, ಹೂ, ಪತ್ರೆಗಳಿಂದ ಪೂಜಿಸಿ, ನೀರಿನಲ್ಲಿ ವಿಸರ್ಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ.ಇದನ್ನು ನಾವು ಮತ್ತೆ ಮುನ್ನಲೆಗೆ ತಂದರೆ ಒಳಿತು ಎಂದು ತಿಳಿಸಿದ್ದಾರೆ.
ಗಣಪತಿಯ ಮಂಟಪದ ಅಲಂಕಾರಕ್ಕೆ ಪ್ಲಾಸ್ಟಿಕ್ ತೋರಣ,ಪ್ಲಾಸ್ಟಿಕ್ ಅಲಂಕಾರಿಕ ವಸ್ತು ಬಳಸದೆ ಹತ್ತಿಯಿಂದ ಮಾಡಿದ ಸಾಂಪ್ರದಾಯಿಕ ಗೆಜ್ಜೆ, ವಸ್ತ್ರ ಬಳಸುವಂತೆ ಮತ್ತು ಪರಿಸರ ಉಳಿಸುವಂತೆ ಅವರು ಮನವಿ ಮಾಡಿದ್ದಾರೆ.