ಜಿಲ್ಲೆ

ಪರಿಸರ ಸ್ನೇಹಿ ಗಣಪಗೆ ಜೇಡಿ ಮಣ್ಣಿನ ಅಭ್ಯಾವ

ಕೊಡೇಕಲ್: ಗಣೇಶ ಚತುರ್ಥಿಗೆ ವಿಘ್ನ ನಿವಾರಕನ ಮಣ್ಣಿನ ಮೂರ್ತಿ ಸಿದ್ಧಪಡಿಸುವಲ್ಲಿ ತಯಾರಕರು ತಲ್ಲೀನರಾಗಿದ್ದು ಒಂದೆಡೆಯಾದರೆ, ಇದಕ್ಕೆ ಬೇಕಾದ ಜೇಡಿ ಮಣ್ಣಿನ ಕೊರತೆ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ಸಿದ್ಧಪಡಿಸಲು ವಿರಳವಾಗುತ್ತಿದೆ.

ಗೌರಿ ಗಣೇಶ ಹಬ್ಬಕ್ಕೆ ದಿನಗಣಗೆ ಆರಂಭವಾಗಿದ್ದು ಈ ನಿಟ್ಟಿನಲ್ಲಿ ಮೂರ್ತಿಗಳಿಗೆ ಅಂತಿಮ ರೂಪ ನೀಡಲಾಗುತ್ತಿದೆ. ಆದರೆ ಈ ವರ್ಷ ಜೇಡಿ ಮಣ್ಣಿನ ಅಭಾವದಿಂದ ಮೂರ್ತಿ ತಯಾರಕರು ಕೇವಲ ಸಣ್ಣ ಮೂರ್ತಿಗಳ ತಯಾರಿಕೆ ಮಾತ್ರ ಮುಂದಾಗಿದ್ದಾರೆ.

ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಗೆ ಜೇಡಿ ಮಣ್ಣಿನ ಅಗತ್ಯವಿದೆ. ಬೇರೆ ಮಣ್ಣಿನಿಂದ ತಯಾರಿಸಲು ಬರುವುದಿಲ್ಲ. ಆದರೆ ಈ ವರ್ಷ ಸುರಿದ ಅಧಿಕ ಮಳೆಯಿಂದಾಗಿ ಕೆರೆಗಳು ಭರ್ತಿಯಾದ ಕಾರಣ ಜೇಡಿ ಮಣ್ಣು ಸಿಗುವುದು ದುಸ್ಥರವಾಗಿದೆ. ಹೀಗಾಗಿ ಕಷ್ಟಪಟ್ಟು ತಂದರೂ ಗುಣಮಟ್ಟದ ಜೇಡಿ ಮಣ್ಣು ದೊರಕುವುದೇ ಇದಕ್ಕೆ ಮೂಲ ಕಾರಣವಾಗಿದೆ. ಹೀಗಾಗಿ ತಯಾರಕರು ದೂರದ ಪ್ರದೇಶದಿಂದ ಜೇಡಿ ಮಣ್ಣು ತರುವ ಅನಿವರ‍್ಯ. ಅಲ್ಲದೆ ಒಂದು ಟ್ರಾö್ಯಕ್ಟರ್ ಜೇಡಿ ಮಣ್ಣಿಗೆ ೧೦ರಿಂದ ೧೫ ಸಾವಿರ ರೂ. ನೀಡಬೇಕು. ಈ ಕಾರಣಕ್ಕಾಗಿ ತಯಾರಕರು ಸ್ವಲ್ಪ ಪ್ರಮಾಣದ ಜೇಡಿ ಮಣ್ಣು ತರಿಸಿ ಸಣ್ಣ ಸಣ್ಣ ಮೂರ್ತಿಗಳನ್ನು ಮಾತ್ರ ಸಿದ್ಧಪಡಿಸುತ್ತಿದ್ದಾರೆ.

ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸಲು ತಯಾರಕರು ತಿಂಗಳ ಮೊದಲೆ ಜೇಡಿ ಮಣ್ಣು, ನೈಸರ್ಗಿಕ ಬಣ್ಣ ಸೇರಿ ಇನ್ನಿತರ ವಸ್ತುಗಳು ತಂದು ಕಷ್ಟಪಟ್ಟು ಮೂರ್ತಿಗಳನ್ನು ತಯಾರಿಸುತ್ತಾರೆ. ಆದರೆ ಅವುಗಳಿಗೆ ಸರಿಯಾದ ಬೆಲೆ ಸಿಗದ ಕಾರಣ ಮೂರ್ತಿ ತಯಾರಕರ ಕುಟುಂಬಗಳ ಆರ್ಥಿಕ ಸ್ಥಿತಿ ಆರಕ್ಕೇರದೆ ಮೂರಕ್ಕೀಳಿಯದಂತಾಗಿದೆ.

ಸರ್ಕಾರದ ನಿಷೇಧ ಹಿನ್ನೆಲೆಯಲ್ಲಿಯೂ ಕೂಡಾ ಪಿಒಪಿ ಗಣೇಶ ಮೂರ್ತಿಗಳ ಮಾರಾಟ ಭರ್ಜರಿಯಾಗಿ ನಡೆದಿದೆ. ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಿಒಪಿ ಗಣೇಶ ಮಾರಾಟಕ್ಕೆ ಕಠಿಣ ಕ್ರಮಕ್ಕೆ ಮುಂದಾದರೆ ಮಾತ್ರ ಪರಿಸರ ಸ್ನೇಹಿ ಗಣೇಶಗೆ ಹೆಚ್ಚಿನ ಬೆಲೆ ಬರಲಿದೆ. ಅದರಲ್ಲೂ ಖರೀದಿ ಮಾಡುವವರು ಕೂಡ ಪಿಒಪಿಗೆ ಹೇಳಿದಷ್ಟು ಹಣ ನೀಡುತ್ತಾರೆ. ಆದರೆ ಪರಿಸರದಿಂದ ತಯಾರಿಸಿದ ಗಣಪಗೆ ಚೌಕಾಸಿ ಮಾಡುತ್ತಾರೆ. ಹೀಗಾಗಿ ಸರಿಯಾದ ಬೆಲೆ ಸಿಗದ ಕಾರಣ ಮೂರ್ತಿ ತಯಾರಕರು ಸಂಕಷ್ಟದಲ್ಲಿ ಜೀವನ ಸಾಗಿಸುವಂತ ಸ್ಥಿತಿ ನಿರ್ಮಾಣವಾಗಿದೆ.