ಮೈಸೂರು: ಸ್ವಚ್ಛತೆ ಎಂದರೆ ಕೇವಲ ಕಸ ತೆಗೆಯುವುದಲ್ಲ. ಜಲ, ವಾಯು ಹಾಗೂ ಶಬ್ದ ಮಾಲಿನ್ಯವನ್ನು ತಡೆಯುವುದೂ ಸ್ವಚ್ಛತೆಯೇ ಎಂದು ಲೇಖಕ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು.
ನಗರದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಆಷಾಢ ಮಾಸದ ಅಂಗವಾಗಿ ಬುಧವಾರ ಆಯೋಜಿಸಿದ್ದ ಚಾಮುಂಡಿ ಬೆಟ್ಟದ ಮೆಟ್ಟಿಲುಗಳ ಸ್ವಚ್ಛತೆ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಈಗ ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ಅತಿ ಮುಖ್ಯವಾಗಿದೆ. ನಮ್ಮ ಸುತ್ತಲ ಪರಿಸರ ಸರ್ವ ರೀತಿಯಲ್ಲಿಯೂ ಸ್ವಚ್ಛವಾಗಿರಬೇಕು. ಆದರೆ ಈಗ ಸ್ವಚ್ಛತೆ ಎಂದರೆ ಕೇವಲ ಕಸ ತೆಗೆಯುವುದು ಎನ್ನುವಂತಾಗಿದೆ. ಆದರೆ ಜಲ, ಭೂ, ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ತಡೆಯುವುದೂ ಸ್ವಚ್ಛತೆಯ ಭಾಗವೇ ಆಗಿದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಸುತ್ತಲಿನ ಪರಿಸರ ಸರ್ವರೀತಿಯಲ್ಲೂ ಪರಿಶುದ್ಧವಾಗಿದ್ದಲ್ಲಿ ಆರೋಗ್ಯಲಕ್ಷ್ಮೀ ಇರುತ್ತಾಳೆ. ನಾವು ಜೀವಿಸುವ ಪರಿಸರ, ಸೇವಿಸುವ ಆಹಾರ, ಕುಡಿಯುವ ನೀರು, ಹಾಗೂ ಉಸಿರಾಡುವ ಗಾಳಿ ಇದೆಲ್ಲವೂ ಶುದ್ಧವಾಗಿದ್ದರೆ ಮಾತ್ರ ನಾವೆಲ್ಲರೂ ಆರೋಗ್ಯವಾಗಿರಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರಲ್ಲೂ ಸ್ವಚ್ಛತೆ ಹಾಗೂ ಪರಿಸರ ಪ್ರಜ್ಞೆ ಇರಬೇಕು ಎಂದರು.
ಗಾಂಧೀಜಿ ಅವರಿಂದ ರಾಜರ್ಷಿ ಎಂದು ಕರೆಸಿಕೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೂ ಸ್ವಚ್ಛ ಪರಿಸರಕ್ಕೆ ಆದ್ಯತೆ ನೀಡಿದ್ದರು. ಇದು ಇಂದು ನಮ್ಮನ್ನು ಆಳುವವರಿಗೆ ಆದರ್ಶವಾಗಬೇಕಿದೆ. ದುರದೃಷ್ಟ ಅಂಥ ಮನೋಭಾವ ರಾಜಕಾರಣಿಗಳಲ್ಲಿ ಕಡಿಮೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕಾರಣ ಸೇರಿದಂತೆ ಇಂದು ಪ್ರತಿಯೊಂದು ಸಾರ್ವಜನಿಕ ಕ್ಷೇತ್ರಗಳು ಕೂಡ ಬಹುಪಾಲು ಅಶುಚಿತ್ವದಿಂದ ಕೂಡಿ ರೋಗಗ್ರಸ್ತವಾಗುತ್ತಿವೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಚ್ಛ ಪರಿಸರದ ಮಹತ್ವವನ್ನು ಅರಿತು ಮೊದಲು ತಮ್ಮನ್ನು ತಾವು ಶುದ್ಧೀಕರಿಸಿ ಕೊಂಡರೆ ಇಡೀ ಪರಿಸರ ಸ್ವಚ್ಛವಾಗುತ್ತದೆ ಎಂದರು.
ಸಂಘದ ಅಧ್ಯಕ್ಷ ಜಯನಗರ ಎಸ್. ಮಹೇಶ್ ಮಾತನಾಡಿ, ಮೈಸೂರಿನ ಹಿರಿಮೆ ಎನಿಸಿರುವ ತಾಯಿ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಪ್ರತಿ ವರ್ಷ ಆಷಾಢ ಮಾಸದಲ್ಲಿ ಸ್ವಚ್ಛ ಮಾಡುವ ಸೇವಾ ಕಾರ್ಯ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
ನಗರದ ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಒಳಚರಂಡಿ ವಿಭಾಗದ ವಿಶ್ರಾಂತ ಇಂಜಿನಿಯರ್ ಕೆಂಪೇಗೌಡ, ಸಂಘದ ಕಾನೂನು ಸಲಹೆಗಾರ ಸುಂದರ್ ರಾಜ್ ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಂ.ರವಿ ಕುಮಾರ್, ಸಹ ಕಾರ್ಯದರ್ಶಿ ಎಸ್.ಪಳನಿಸ್ವಾಮಿ, ಖಜಾಂಚಿ ಎಂ. ಪ್ರಕಾಶ್, ನಿರ್ದೇಶಕರಾದ ಚಂದ್ರೇಗೌಡ, ರುದ್ರಸ್ವಾಮಿ, ಮೊಹಮದ್ ಜಾಕಿರ್ ಹುಸೇನ್, ಶಿವರಾಜ್, ಯೋಗೇಶ್ ಹೆಬ್ಬಾಳು, ಹಿರಿಯ ಸದಸ್ಯರಾದ ಬಸವರಾಜು, ಕುಮಾರ್, ಸಿದ್ದರಾಜು, ಕಾಳೇಗೌಡ, ಮುನಿರತ್ನ, ಮಹದೇವು, ಕೃಷ್ಣ ಇತರರು ಇದ್ದರು.