ಉತ್ತಮ ಸಮಾಜಕ್ಕಾಗಿ ಉತ್ತಮ ಪರಿಸರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.ಜಯರಾಮ ಬೊಳ್ಳಾಜೆ ,ಡಾ.ನಾರಾಯಣ, ಹರೀಶ್ ಕುಮಾರ್, ಚಿತ್ರಕಲಾ, ಗೀತಾ ಇತರರಿದ್ದರು. 
ಜಿಲ್ಲೆ

ಪರಿಸರ ಸಮತೋಲನ ಅತ್ಯಗತ್ಯ

ಅರಸೀಕೆರೆ: ನಾಗರಿಕತೆಯು ನಾಗಾಲೋಟದಲ್ಲಿ ಬೆಳೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪರಿಸರ ಸಮತೋಲನ ಕಾಪಾಡುವುದು ಅತ್ಯಗತ್ಯವಾಗಿದೆ ಎಂದು ಬೆಂಗಳೂರಿನ ಪರಿಸರ ಚಿಂತಕ ಜಯರಾಮ ಬೊಳ್ಳಾಜೆ ಹೇಳಿದರು.

ನಗರದ ಹೊರ ಹೊಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಉತ್ತಮ ಸಮಾಜಕ್ಕಾಗಿ ಉತ್ತಮ ಪರಿಸರ ವಿಷಯ ಕುರಿತು ಗುರುವಾರ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಲ ಸಂರಕ್ಷಣೆ, ವೃಕ್ಷ ಪೋಷಣೆ, ಪ್ಲಾಸ್ಟಿಕ್ ಹಠಾವೋ, ಸ್ಮಾರಕಗಳ ಸಂರಕ್ಷಣೆ ಹಾಗೂ ಸ್ವಯಂ ಸೇವಾ ಮನೋಭಾವನೆ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ನಾಗರಿಕರು ಅತ್ಯಗತ್ಯವಾಗಿ ಪಾಲಿಸಬೇಕಾಗಿರುವ ಮೌಲ್ಯಗಳಾಗಿವೆ. ಸಂವಿಧಾನದ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸುವುದು ನಮ್ಮೆಲ್ಲರ ಸಂಕಲ್ಪ ವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ.ಗೀತಾ ಮಾತನಾಡಿ, ನಾವು ವಾಸಿಸುವ ಪರಿಸರ ಮತ್ತು ಮನಸ್ಸನ್ನು ಶುಚಿತ್ವದಿಂದ ಇಟ್ಟುಕೊಳ್ಳಬೇಕು ಎಂಬುದಾಗಿ ಕರೆ ನೀಡಿದರು.

ಪ್ರಾಂಶುಪಾಲ ಡಾ.ಎಸ್.ನಾರಾಯಣ ಮಾತನಾಡಿ, ಮುಂದಿನ ಪೀಳಿಗೆಗೆ ಸುಸಜ್ಜಿತವಾದ ಪರಿಸರವನ್ನು ಬಿಟ್ಟು ಹೋಗುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಚಿತ್ರಕಲಾ, ಪ್ರಾಧ್ಯಾಪಕರಾದ ಡಾ.ಹರೀಶ್ ಕುಮಾರ್, ಡಾ.ರಾಜೇಶ್ ಖನ್ನಾ, ರಾಘವೇಂದ್ರ ಭಜಂತ್ರಿ, ಹರೀಶ್, ರತ್ನಮ್ಮ, ಗಂಗಾ, ಶಿವಣ್ಣ ಉಪಸ್ಥಿತರಿದ್ದರು.