ಜಿಲ್ಲೆ

ಪರಿಸರ ಸಮತೋಲಕ್ಕೆ ಕೈಜೋಡಿಸಿ

ಮೈಸೂರು: ಪರಿಸರದಲ್ಲಿ ಸಮತೋಲನ ಕಾಪಾಡಲು ಎಲ್ಲರೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳು ರಾಯಭಾರಿಗಳಾಗಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಹೇಳಿದರು


ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾನುವಾರ ಆಯೋಜಿಸಿದ್ದ 31ನೇ ಯುವ ಸಂಘಟನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಮನುಷ್ಯರಾದ ನಾವು ಸ್ವಾರ್ಥ ಬಿಡಬೇಕು. ಪರಿಸರ ಹಾಗೂ ಅರಣ್ಯ ಸಂಪತ್ತನ್ನು ಮುಂದಿನ ಪೀಳಿಗೆಗೂ ಕಾಪಾಡಿಕೊಳ್ಳಬೇಕು. ನಮ್ಮ ಭೂಮಿಯನ್ನು ರಕ್ಷಿಸಬೇಕು ಎಂದು ಹೇಳಿದರು.


ನಾಗರಿಕ ಸುಖ-ಸಂತೋಷಕ್ಕಾಗಿ ನಿಸರ್ಗದ ಸಂಪತ್ತನ್ನೆಲ್ಲ ಬಳಸಿಕೊಳ್ಳುವುದು ಸುಸ್ಥಿರ ಅಭಿವೃದ್ಧಿ ಆಗುವುದಿಲ್ಲ. ಉತ್ತಮ ಪರಿಸರವನ್ನು ಮುಂದಿನ ಪೀಳಿಗೆಗೂ ಉಳಿಸುವುದು ಎಲ್ಲರ ಹೊಣೆಗಾರಿಕೆ ಆಗಿದೆ ಎಂದರು.


ಆಧುನಿಕ ಯುಗದಲ್ಲಿ ಬಹುತೇಕರು ಹಣ ಸಂಪಾದನೆ ಮಾಡಿ ನೆಮ್ಮದಿ ಪಡೆಯಲು ಕಸರತ್ತು ಮಾಡುತ್ತಿದ್ದಾರೆ. ಇದು ಸರಿಯಲ್ಲ. ಪರಿಸರ ಉಳಿದರೆ ಮನುಷ್ಯ ಉಳಿಯುತ್ತಾನೆ. ಪರಿಸರ ಹಾಳಾದರೆ ಇಡೀ ಭೂಮಂಡಲಕ್ಕೆ ಕಂಟಕ ಎದುರಾಗಲಿದೆ ಎಂದು ಎಚ್ಚರಿಸಿದರು. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಮಹೇಶ್‌ಕುಮಾರ್ ಇದ್ದರು.


ಮಕ್ಕಳಿಗೆ ಸಂರಕ್ಷಣೆ ಪಾಠ:
ಮೃಗಾಲಯದ ಯುವ ಸಂಘಟನೆ ಒಂದು ಶೈಕ್ಷಣಿಕ ಕಾರ್ಯಕ್ರಮವಾಗಿದ್ದು, 12ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಪ್ರತಿ ವರ್ಷ ನಡೆಸಲಾಗುತ್ತದೆ. ಗರಿಷ್ಠ 60 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಇವರಿಗೆ ವನ್ಯಪ್ರಾಣಿಗಳ ವೈವಿಧ್ಯತೆ, ಮೌಲ್ಯ, ಸಂರಕ್ಷಣೆ ಹಾಗೂ ಮೃಗಾಲಯ ಪರಿಸರದಲ್ಲಿ ಪ್ರಾಣಿಗಳ ನಿರ್ವಹಣೆ, ಅವುಗಳ ವರ್ತನೆ ಬಗ್ಗೆ ತರಗತಿಗಳ ಮೂಲಕ ತಿಳಿಸಿಕೊಡಲಾಗುತ್ತದೆ.