ಜಿಲ್ಲೆ

ಪರಿಸರ ಸಂರಕ್ಷಣೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ:ನ್ಯಾ. ಟಿ.ಎನ್. ಇನವಳ್ಳಿ

ಹಾಸನ: ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮತ್ತು ಅದರ ಮಹತ್ವವನ್ನು ತಿಳಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಎನ್. ಇನವಳ್ಳಿ ಅಭಿಪ್ರಾಯಪಟ್ಟರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರ ಸಭೆ, ಹಾಸನ ವ್ಯೆದ್ಯಕೀಯ ವಿಜ್ಞಾನಗಳ ಸಂಸ್ಥೆ, ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮತ್ತು ಕೈಗಾರಿಕೆಗಳು ಇವರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ದಿನಾಚರಣೆ ಎಂಬುದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪರಿಸರ, ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವು ಮತ್ತು ಜವಾಬ್ದಾರಿಯಾಗಿದೆ. ಜಾಗೃತಿ ಮತ್ತು ಅರಣ್ಯಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಕಾಡು ನಾಶ ಮಾಡಿದರೆ ಮತ್ತೆ ಬೆಳೆಸುವರು ಯಾರು ಎಂಬ ಪ್ರಶ್ನೆ ಈಗ ನಮ್ಮೆಲ್ಲರ ಮುಂದೆ ಇದೆ. ಮಕ್ಕಳು ಒಂದು ಗಿಡವನ್ನು ನೆಡುವ ಮೂಲಕ ಪರಿಸರದ ಜಾಗೃತಿ ಮತ್ತು ಅದರ ಮಹತ್ವವನ್ನು ನಾವೆಲ್ಲರೂ ತಿಳಿದು ಕೊಳ್ಳಬೇಕಾಗಿದೆ ಕೆರೆ, ಬಾವಿ, ಮ-ಗಿಡಗಳನ್ನು ಬೆಳೆಸಿ ಅರಣ್ಯ ಸಂರಕ್ಷಣೆ ಮಾಡಿ ಎಂದು ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಬಿ.ಆರ್. ಪೂರ್ಣಿಮಾ ಮಾತನಾಡಿ, ಈಗಾಗಲೇ ಪರಿಸರಕ್ಕೆ ಸಾಕಷ್ಟು ಹಾನಿ ಉಂಟು ಮಾಡಲಾಗಿದೆ. ಪರಿಸರ ಸಂರಕ್ಷಣೆಗಾಗಿ ನಮ್ಮ ಭೂಮಿ ನಮ್ಮ ಭವಿಷ್ಯ ಎಂಬ ಧ್ಯೇಯವಾಕ್ಯದೊಂದಿಗೆ ನಾಗರಿಕ ಪ್ರಜ್ಞೆ ಕರ್ತವ್ಯ ಮಾಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ನಿರ್ಮೂಲನೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವು ಮತ್ತು ಜವಾಬ್ದಾರಿಯಾಗಿದೆ. ತಮ್ಮ ಮನೆ ತ್ಯಾಜ್ಯವನ್ನು ರಸ್ತೆಯ ಬದಿಯಲ್ಲಿ ಎಸೆದು ಹೋಗುವ ಮೂಲಕ ಅನೈರ್ಮಲ್ಯ ಉಂಟು ಮಾಡಬಾರದು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಕೆ. ದಾಕ್ಷಾಯಿಣಿ ಮಾತನಾಡಿ, ನಮ್ಮ ಸುತ್ತಮುತ್ತಲ ಇರುವ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮ ಮೂಲಭೂತ ಕರ್ತವ್ಯವಾಗಿದೆ. ಮರ ಗಿಡಗಳಿಂದ ಶುದ್ಧ ಗಾಳಿ, ಆಮ್ಲಜನಕ ಸಮತೋಲನ ಉಂಟು ಮಾಡುತ್ತದೆ. ಎಲ್ಲರೂ ಸಾಧ್ಯವಾದಷ್ಟು ಗಿಡಗಳನ್ನು ಬೆಳೆಸಿ ಅವುಗಳ ಪೋಷಣೆ ಮಾಡಬೇಕು. ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ತಿಳಿಸಿದರು.
ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್ ಮಾತನಾಡಿ, ಅರಣ್ಯಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ಎಲ್ಲರೂ ಸಹಕಾರ ನೀಡಬೇಕು, ಕಾಡು ನಾಶ ಮಾಡದಂತೆ ನೋಡಿಕೊಳ್ಳಬೇಕು. ಪರಿಸರವನ್ನು ನಮ್ಮ ಪೀಳಿಗೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಹಾಸನದಲ್ಲಿ ಇಷ್ಟು ವರ್ಷಗಳ ಕಾಲ ಜಿಲ್ಲಾ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿ ಬೇರೆಡೆಗೆ ವರ್ಗಾವಣೆಗೊಂಡ ನ್ಯಾ. ಟಿ.ಎನ್. ಇನವಳ್ಳಿ ಅವರನ್ನು ಇದೆ ವೇಳೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆಚರಣದಲ್ಲಿ ಪರಿಸರ ಜಾಗೃತಿ ಜಾಥಗೆ ಚಾಲನೆ ನೀಡಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥ ಸಾಗಿ ಹಾಸನಾಂಬ ಕಲಾಕ್ಷೇತ್ರಕ್ಕೆ ಆಗಮಿಸಿತು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಟಿ ಜವರೇಗೌಡ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಕೆ. ಕೀರ್ತಿಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪುಲ್‌ಕಿತ್ ಮೀನಾ, ಆಕಾಶವಾಣಿ ಕಾರ್ಯಕ್ರಮದ ಮುಖ್ಯಸ್ಥ ಡಾ. ವಿಜಯ ಅಂಗಡಿ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಶಿಕ್ಷಕಿ ಕಾಂಚನಾ ಮಾಲಾ ಇತರರು ಭಾಗವಹಿಸಿದ್ದರು.